ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಬಸವಾದಿ ಶರಣರ ಸಾಮಾಜಿಕ ಚಳುವಳಿ ಯಾವುದೇ ಒಂದು ವರ್ಗ (Caste) ಅಥವಾ ಸಮಾಜಕ್ಕೆ ಸೀಮಿತವಾಗಿರಲಿಲ್ಲ. ಎಲ್ಲ ಗಡಿಗಳನ್ನು ದಾಟಿ ಲೋಕಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಶರಣರು ಚಳುವಳಿ ನಡೆಸಿದರು. ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಹಾಗೂ ಅಂತಹ ಸಮಾಜದ ಸರ್ವಾಂಗೀಣ ಅಭಿವೃದ್ಧಿಯೇ ಅವರ ಚಳುವಳಿಯ ಹಿಂದಿನ ಪ್ರಮುಖ ಆಶಯವಾಗಿತ್ತು ಎಂದು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಹೇಳಿದರು.
ಪಟ್ಟಣದ ಕುಮದ್ವತಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕುಮದ್ವತಿ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಲಿಂ. ಹಾದ್ರಿಹಳ್ಳಿ ಕಾತ್ಯಾಯಣಮ್ಮ ಮತ್ತು ಲಿಂ. ಈಶ್ವರಪ್ಪ ದತ್ತಿ ಉಪನ್ಯಾಸ (Lecture) ಕಾರ್ಯಕ್ರಮದಲ್ಲಿ ‘ಶರಣರ ಲೋಕ ಸಂದೇಶ’ ವಿಷಯದ ಕುರಿತು ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಶಿಕ್ಷಣದ ಮೂಲಕ ವೈಚಾರಿಕ ಜಾಗೃತಿ
ಬಸವಾದಿ ಪ್ರಮಥರು ಜನಸಾಮಾನ್ಯರಿಗೆ ಶಿಕ್ಷಣವನ್ನು ನೀಡುವ ಮೂಲಕ ಅಂದಿನ ಸಮಾಜದಲ್ಲಿ ವೈಚಾರಿಕ ಸ್ಪೋಟಕ್ಕೆ ಕಾರಣರಾದರು. ಲೌಕಿಕ ಬದುಕಿನ ಸುಧಾರಣೆ, ಅಂತರಂಗ ಮತ್ತು ಬಹಿರಂಗ ಶುದ್ಧಿ, ಲಿಂಗ ಸಮಾನತೆ ಹಾಗೂ ಸಮಾಜದಲ್ಲಿನ ಅಪಮೌಲ್ಯಗಳ ನಿವಾರಣೆಗೆ ಶರಣರು ಶ್ರಮಿಸಿದರು. ಅವರ ಚಿಂತನೆಗಳು ಸಮಾಜದ ಎಲ್ಲ ವರ್ಗದ ಜನರ ಬದುಕಿನಲ್ಲಿ ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದವು ಎಂದು ಕೆ.ಎಚ್. ಪುಟ್ಟಪ್ಪ ಬಿಳವಾಣಿ ತಿಳಿಸಿದರು.
Caste: ಮುಂದಿನ ಪೀಳಿಗೆಗೆ ಶರಣ ತತ್ವ ತಲುಪಿಸುವ ಅಗತ್ಯ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮದ್ವತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೀರೇಂದ್ರ ಗೌಡ್ರು, ಮುಂದಿನ ಪೀಳಿಗೆಗೆ ಶರಣರ ತತ್ವ ಹಾಗೂ ಚಿಂತನೆಗಳನ್ನು ತಲುಪಿಸುವ ಕಾರ್ಯ ನಡೆಯಬೇಕು. ಎಲ್ಲ ಜಾತಿ ಮತ್ತು ಧರ್ಮದವರಿಗೂ ಶರಣರ ವಿಚಾರಧಾರೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮೂಢನಂಬಿಕೆಗಳನ್ನು ಶರಣರು ವಿರೋಧಿಸಿದ್ದರು
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಸುಭಾಷ್ ಚಂದ್ರ ಸ್ಥಾನಿಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಪ್ರಾಣಿಗಳ ಪೈಕಿ ಮನುಷ್ಯ ಅತ್ಯಂತ ಬುದ್ಧಿವಂತ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳಿಂದ ಮೂರ್ತಿಗಳನ್ನು ಕೆತ್ತಿ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ನೀಡಿದ್ದಾನೆ. ಆದರೆ ಲೋಕದ ಸಕಲ ಜೀವಿಗಳಿಗೂ ದೇವರು ಒಬ್ಬನೇ. ಮನುಷ್ಯರು ಮಾತ್ರ ಆ ದೇವರನ್ನು ಬೇರೆ ಬೇರೆ ನಾಮಗಳಲ್ಲಿ ಕರೆಯುತ್ತಾರೆ. ಶರಣರು ಇಂತಹ ಮೂಢನಂಬಿಕೆಗಳನ್ನು ವಿರೋಧಿಸಿ ವೈಚಾರಿಕ ಚಿಂತನೆಗೆ ಒತ್ತು ನೀಡಿದ್ದರು ಎಂದು ಹೇಳಿದರು.
ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಕೆ. ಶಶಿಧರ ಸ್ವಾಮಿ, ಬಸವಾದಿ ಪ್ರಮಥರ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ವಿಚಾರಧಾರೆಗಳು ಹಾಗೂ ವಚನ ಸಾಹಿತ್ಯವನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವ ಮೂಲಕ ಅದರಲ್ಲಿರುವ ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
Also read>> ಶರಣ ಸಾಹಿತ್ಯ ಮಾನವ ಬದುಕಿನ ಮೂಲ ಜೀವದ್ರವ್ಯ: ಬಸವನಗೌಡ ಮಾಳಗಿ
ಕಾರ್ಯಕ್ರಮದಲ್ಲಿ ದತ್ತಿದಾನಿಗಳಾದ ಈರಣ್ಣ ಮೃತ್ಯುಂಜಯ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಸೋಮಶೇಖರಗಟ್ಟಿ, ಕೋಶಾಧ್ಯಕ್ಷ ಎಚ್.ಜಿ. ಮೃತ್ಯುಂಜಯ, ಉಪನ್ಯಾಸಕರಾದ ಚಂದ್ರಶೇಖರ್, ಸಂಜೀವ್, ರಘು, ಪ್ರೇಮ, ಸುಪ್ರೀಯಾ ಹಾಗೂ ದೀಪಾ ಪಾಟೀಲ್ ಉಪಸ್ಥಿತರಿದ್ದರು.
ಕು. ಅನುಷ್ಕಾ ನಾಡಿಗ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಯೋಗರಾಜ್ ಸ್ವಾಗತಿಸಿದರು. ನಳಿನಾ ಪಾಟೀಲ್ ವಂದಿಸಿದರು. ಶಿವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












