ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ್ದು, ಈ ಕುರಿತಂತೆ ಸೋಮವಾರವೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
ಐಎಂಎ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆದ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ಆದೇಶವನ್ನು ರಾಜ್ಯ ಸರ್ಕಾರ ಸೋಮವಾರವೇ ಹೊರಡಿಸಿದೆ ಎಂದು ತಿಳಿಸಿದ್ದು, ಇದರ ಮುಚ್ಚಿದ ಲಕೋಟೆಯನ್ನು ಸಲ್ಲಿಸಿದ್ದಾರೆ.
ಬಹುಕೋಟಿ ಐಎಂಎ ಹಗರಣದಲ್ಲಿ ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 50 ಸಾವಿರ ಹೂಡಿಕೆದಾರರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದು, ಈ ಕುರಿತಂತೆ ಸಾವಿರಾರು ಪ್ರಕರಣಗಳು ದಾಖಲಾಗಿವೆ.
ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತನ್ನ ಅವಧಿಯಲ್ಲಿ ಟೆಲಿಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದೆ. ಇದರ ಬೆನ್ನಲ್ಲೇ, ಬಿಜೆಪಿ ಸರ್ಕಾರ ಸಿಬಿಐಗೆ ವಹಿಸುತ್ತಿರುವ ಎರಡನೆಯ ಪ್ರಕರಣ ಇದಾಗಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Discussion about this post