ಶಿವಮೊಗ್ಗ: ಸಹ್ಯಾದ್ರಿ ಉತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಸಹ್ಯಾದ್ರಿ ಸಿನಿಮೋತ್ಸವಕ್ಕೆ ಹಿರಿಯ ಚಿತ್ರನಟ ವಿಜಯ ಕಾಶಿ ಇಂದು ಚಾಲನೆ ನೀಡಿದರು.
ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಭಾರತ ಸಿನೆಮಾಸ್‌ನಲ್ಲಿ ಚಿತ್ರೋತ್ಸವದ ಪ್ರದರ್ಶನಗಳು ನಡೆಯುತ್ತಿವೆ. ಸಿಟಿ ಸೆಂಟರ್ ಮಾಲ್ ಆವರಣದಲ್ಲಿ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಚಿತ್ರೋತ್ಸವ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.
ಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರನಟ ವಿಜಯ ಕಾಶಿ, ಚಿತ್ರೋತ್ಸವಗಳು ಜನರಲ್ಲಿ ಸದಭಿರುಚಿಯನ್ನು ಮೂಡಿಸಲು ಸಹಕಾರಿಯಾಗಿದೆ. ಶಿವಮೊಗ್ಗ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಸಿನೆಮಾ, ರಂಗಭೂಮಿ ಕ್ಷೇತ್ರಗಳಿಗೆ ಅಪಾರವಾದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಚಿತ್ರನಟಿ ಭಾವನಾ ರಾವ್ ಹಾಗೂ ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಅವರು ಚಿತ್ರೋತ್ಸವಕ್ಕೆ ಶುಭ ಹಾರೈಸಿದರು. ಉಪ ವಿಭಾಗಾಧಿಕಾರಿ ಪ್ರಕಾಶ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಫಿ ಸಾದುದ್ದಿನ್ ವಂದಿಸಿದರು. ಬೆಳ್ಳಿಮಂಡಲದ ಕಾರ್ಯದರ್ಶಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.
ಸಂವಾದ ಕಾರ್ಯಕ್ರಮ: ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ, ಒಂದಲ್ಲಾ ಎರಡಲ್ಲ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಅವರೊಂದಿಗೆ ಚಿತ್ರ ವೀಕ್ಷಣೆ ಬಳಿಕ ಸಂವಾದ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಿನೆಮಾ ನಿರ್ಮಾಣದ ವಿವಿಧ ಮಗ್ಗುಲುಗಳ ಕುರಿತು ಕುತೂಹಲಕರ ಪ್ರಶ್ನೆಗಳನ್ನು ಕೇಳಿದರು.
ಸಿನೆಮಾ ಪ್ರದರ್ಶನ: ಜನವರಿ 25ರಿಂದ 27ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ ೮ಗಂಟೆಯಿಂದ ನಾಲ್ಕು ಪರದೆಗಳಲ್ಲಿ ಏಕಕಾಲದಲ್ಲಿ ಚಿತ್ರಪ್ರದರ್ಶನ ಆರಂಭವಾಗಲಿದೆ. ಪ್ರದರ್ಶನ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಶುಕ್ರವಾರ ಮಕ್ಕಳ ಸಿನೆಮಾಗಳಾದ ಸ.ಹಿ.ಪ್ರಾ.ಶಾಲೆ ಕಾಸರಗೋಡು, ಜೀರ್ಜಿಂಬೆ, ಮೈತ್ರಿ ಮತ್ತು ಎಳೆಯರು ನಾವು ಗೆಳೆಯರು ಚಿತ್ರ ಪ್ರದರ್ಶನ ನಡೆಯಲಿದೆ.
(ವರದಿ: ಡಾ.ಸುಧೀಂದ್ರ)
Discussion about this post