ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗ್ರಾಮೀಣ ಭಾಗದಲ್ಲಿ ಗೋವುಗಳ ಹಬ್ಬವೆಂದೇ ಕರೆಸಿಕೊಳ್ಳುವ ದೀಪಾವಳಿಯ ಮೂರನೇ ದಿನದ ಬಲಿಪಾಡ್ಯಮಿ ಹಬ್ಬವನ್ನು ಬುಧವಾರ ಚಂದ್ರಗುತ್ತಿಯಲ್ಲಿ ವೈಶಿಷ್ಟ ಪೂರ್ಣವಾಗಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ರೈತರು ಪ್ರೀತಿಯಿಂದ ಸಾಕಿರುವ ಜಾನುವಾರುಗಳನ್ನು ಬಗೆಬಗೆಯ ಬಲೂನ್ ಮತ್ತು ವಿವಿಧ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಿ ಕೊಟ್ಟಿಗೆಯ ಬಾಗಿಲುಗಳಿಗೆ ತಳಿರು ತೋರಣ ಅಲಂಕಾರವನ್ನು ಮಾಡಲಾಗಿತ್ತು. ಹಸು-ಕರು ಎತ್ತುಗಳನ್ನು ಸ್ನಾನಮಾಡಿಸಿ ಶುದ್ಧಗೊಳಿಸಿ ಮೈಯಿಗೆ ಬಣ್ಣ ಬಣ್ಣದ ಪಟ್ಟೆ ಬಳೆದು. ಕೊರಳಿಗೆ ಅಡಿಕೆ ಸಿಂಗಾರ, ಹೂವಿನಿಂದ ಅಲಂಕಾರ, ವಿಳೆದೆಲೆ, ಸಪ್ಪೆ ರೊಟ್ಟಿ ಇರುವ ಹಾರ ಹಾಕಿ ಪೂಜಿಸಿದರು.
ಗೋಪೂಜೆ:
ಅಕ್ಕಿ, ಬೆಲ್ಲ, ಬಾಳೆಹಣ್ಣು ಮಿಶ್ರಣದ ಗೋಗ್ರಾಸ ಮತ್ತು ಕಡುಬನ್ನು ಗೋವುಗಳಿಗೆ ನೈವೇದ್ಯವಾಗಿ ನೀಡಿ ಕಾಲು ಪೂಜೆಯನ್ನು ಸಲ್ಲಿಸಿ ಭಕ್ತಿಯಿಂದ ಪ್ರಾರ್ಥಿಸಿದರು. ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಿದ್ದು, ಗೋಮಾತೆ ದೇವತೆ ಎಂದು ಭಾವಿಸಿ ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪುರಾಣ, ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದೆ. ಎಂಬ ಬಲವಾದ ನಂಬಿಕೆ ಸಮಾಜದಲ್ಲಿದೆ. ಭಗವದ್ಗೀತೆ ಭಾಗವತ ಮಹಾಪುರಾಣ ಮತ್ತಿತರ ಪುರಾಣಗಳಲ್ಲಿ ಗೋವುಗಳ ಮಹತ್ವದ ಬಗ್ಗೆ ಉಲ್ಲೇಖವಿದೆ,
ಗ್ರಾಮದ ಎಲ್ಲ ಜಾನುವಾರುಗಳಿಗೆ ಗ್ರಾಮಸ್ಥರು ತೆಂಗಿನಕಾಯಿ ಸುಳಿಯುವ ಮೂಲಕ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಬಳಿಕ ಎತ್ತುಗಳನ್ನು ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು.
ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಧಿಸೂಚಿತ ದೇವಾಲಯಗಳಲ್ಲಿ ಗೋ ಪೂಜೆ ಆಚರಣೆಗೆ ಮುಜರಾಯಿ ಇಲಾಖೆ ಸೂಚನೆ ನೀಡಿದ್ದು. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆನ್ನು ವಿಧಿ – ವಿಧಾನಗಳೊಂದಿಗೆ ಆಚರಿಸಲಾಯಿತು.
ಕೃಷಿಕರು ತಮ್ಮ ಹೊಲ ಗದ್ದೆಗಳಲ್ಲಿ ಬೆಳೆದ ಫಸಲನ್ನು ತಂದು ದೇವರಿಗೆ ಅರ್ಪಿಸಿ ವಿಶೇಷ ಪೂಜೆ, ಸಿಹಿ ಕಜ್ಜಾಯ, ಬಗೆ ಬಗೆಯ ನೈವೇದ್ಯಗಳುನ್ನು ಮಾಡಲಾಯಿತು. ಇನ್ನು ಗ್ರಾಮದ ಮನೆ ಮನೆ ಬಾಗಿಲಿನ ಎದುರು ಹಸಿರು ತೋರಣದಿಂದ ಅಲಂಕರಿಸಲಾಗಿತ್ತು. ಮನೆಯ ಅಂಗಳ ಬಳಿದು ಬಿಡಿಸಿದ ರಂಗೋಲಿಯ ಚಿತ್ತಾರಗಳು ಗಮನ ಸೆಳೆದವು. ಸಂಜೆ ದೀಪಾವಳಿ ಬೆಳಕಿನಲ್ಲಿ, ಆಕಾಶ ಬುಟ್ಟಿಯ ಚಿತ್ತಾರದಲ್ಲಿ ಜಗಮಗಿಸುವ ನಕ್ಷತ್ರಗಳ ಮಧ್ಯ ಆಕರ್ಷಕ ಸಿಡಿಮದ್ದು ಸಿಡಿಸಿ, ಸಂಭ್ರಮಿಸಿದರು.
ಗ್ರಾಮದ ಯುವಕರು ನೆಚ್ಚಿನ ಹೋರಿ ಜೊತೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಕಂಗೊಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Cha
Discussion about this post