ಚಳ್ಳಕೆರೆ: ಚಿತ್ರದುರ್ಗ ರಸ್ತೆಯಲ್ಲಿ 1944 ನೆಯ ಸಾಲಿನಲ್ಲಿ ಸ್ಥಾಪನೆಯಾದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ 75ನೆಯ ವರ್ಷದ ವಜ್ರ ಮಹೋತ್ಸವ ಆಚರಿಸುವ ಕುರಿತು ಸಮಾಲೋಚನೆ ನಡೆಸಲು ಹಳೆ ವಿದ್ಯಾರ್ಥಿಗಳ ಸಂಘದಿಂದ ಜೂನ್ 16 ರ ಭಾನುವಾರದಂದು ಶಾಸಕ ಟಿ. ರಘುಮೂರ್ತಿರವರ ಅಧ್ಯಕ್ಷೆಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಮುಖ್ಯಶಿಕ್ಷಕ ವಸಂತಕುಮಾರ್ ತಿಳಿಸಿದ್ದಾರೆ.
ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ನಾಡಿನ ಹಲವೆಡೆ ವಿವಿಧ ಉದ್ಯೋಗದಲ್ಲಿದ್ದಾರೆ. ಇನ್ನು ಕೆಲವರು ವಿಜ್ಞಾನಿಗಳು, ಕ್ರೀಡಾಪಟುಗಳು ಹಾಗೂ ಆದರ್ಶ ಶಾಸಕರು, ಮಂತ್ರಿಗಳೂ ಆಗಿದ್ದಾರೆ ಎಂದು ಹೇಳಿದರು.
ನಗರಸಭೆ ಸದಸ್ಯ ಕೆ.ಸಿ. ಸುರೇಶ್, ಬಡ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಕ್ಕಾಗಿ ದತ್ತಿನಿಧಿ ಸ್ಥಾಪನೆ, ವಜ್ರಮಹೋತ್ಸವದ ನೆನೆಪಿಗಾಗಿ ಹಳೆ ವಿದ್ಯಾರ್ಥಿಗಳ ಭವನ, ಚಳ್ಳಕೆರೆಯ ಇತಿಹಾಸ ಕುರಿತ ವಿಶೇಷ ಸ್ಮರಣ ಸಂಚಿಕೆ ಹೊರ ತರುವ ಉದ್ದೇಶದಿಂದ ಅಭಿಪ್ರಾಯ ಪಡೆಯುವ ಸಲುವಾಗಿ ಸಭೆ ಕರೆಯಲಾಗಿದೆ.
ಆದ್ದರಿಂದ ಈ ಶಾಲೆಯಲ್ಲಿ ಓದಿದ ಎಲ್ಲಾ ಹಳೆ ವಿದ್ಯಾಥಿಗಳು ತಪ್ಪದೇ ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ವಿದ್ಯಾರ್ಥಿಗಳಾದ ಯತೀಶ್, ಈಗಾಗಲೇ ಹಳೆ ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಹಳೆ ವಿದ್ಯಾರ್ಥಿ ಸುರೇಶಚಾರಿ, ನರಸಿಂಹಮೂರ್ತಿ ಮಾತನಾಡಿದರು. ದೈಹಿಕ ಶಿಕ್ಷಕ ಎಂ.ರೇವಣ್ಣ, ಶಿಕ್ಷಕಿಯರಾದ ಪುಷ್ಪಾ, ಯಶೋಧ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post