ಚಳ್ಳಕೆರೆ: ಮಳೆಗಾಲದಲ್ಲಿ ಮನೆ ಸುತ್ತಮುತ್ತ ನಿಲ್ಲುವ ನೀರಿನಲ್ಲಿ ಲಾರ್ವಗಳು ಹೆಚ್ಚಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಎನ್ನುವ ಘೋಷಣೆಯಂತೆ ಮಲೇರಿಯಾ ರೋಗದ ಬಗ್ಗೆ ಪ್ರತಿಯೊಬ್ಬರು ಜಾಗೃತಿ ಮೂಡಿಸಬೇಕು ಎಂದು ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಷೀರ್ ಹೇಳಿದರು.
ನಗರದ ಸೋಮುಗುದ್ದಿ ರಸ್ತೆಯಲ್ಲಿರುವ ಮಾಜಿ ಸೈನಿಕ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳೊಂದಿಗೆ ಮಲೇರಿಯಾ ಜಾಗೃತಿ ಜಾಥದಲ್ಲಿ ಪಾಲ್ಗೊಂಡು ಮಾತನಾಡಿದರು.
ಹೆಚ್ಚಿನದಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ರೋಗ ಹರಡಂತೆ ಮುನ್ನೆಚ್ಚರಿಕೆ ಮನೆ ಮುಂದೆ ನೀರು ನಿಲ್ಲದಂತೆ ನೋಡಿಕೋಳ್ಳಬೇಕು. ಮನೆಯಲ್ಲಿ ತೊಟ್ಟಿ ಇದ್ದರೆ, ಎರಡು ದಿನಕ್ಕೊಮ್ಮೆಯಾದರು ಸ್ವಚ್ಚ ಮಾಡಬೇಕು. ಡ್ರಂ, ಹಳೇ ಟೈರು, ಎಳನೀರಿನ ಚಿಪ್ಪು ನೀರುಯುಕ್ತ ವಸ್ತುಗಳನ್ನು ಇಲ್ಲದಂತೆ ನೋಡಿಕೊಳ್ಳಬೇಕು. ಏಕೆಂದರೆ ಇದರಲ್ಲಿ ಸೊಳ್ಳೆಗಳು ಸೇರಿಕೊಂಡು ರೋಗ ಹರಡುವ ಸಂಭವವಿರುತ್ತದೆ. ಪ್ರತಿಯೊಬ್ಬರು ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸಿ ಸೊಳ್ಳೆ ಕಡಿತದಿಂದ ದೂರವಿದ್ದಾಗ ಮಾತ್ರ ಮಲೇರಿಯಾ ರೋಗವನ್ನು ತಡೆಗಟ್ಟಬಹುದು ಎಂದರು.
ಆರೋಗ್ಯ ಮೇಲ್ವಿಚಾರಕ ಎಸ್.ಬಿ. ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಮಲೇರಿಯಾ ಡೆಂಗ್ಯೂ ರೋಗ ರಹಿತ ಸಮಾಜ ನಿರ್ಮಾಣ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಮಳೆಗಾಲವಾದುದ್ದರಿಂದ ಮಲೇರಿಯಾ, ಡೆಂಗ್ಯೂ ಹರಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ನಗರದ ಪ್ರತಿ ಶಾಲೆಯಿಂದ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಲೇರಿಯಾ ಹಬ್ಬಿಸುವ ಸೊಳ್ಳೆಗಳು ಹೆಚ್ಚಾಗಿ ತಗ್ಗು ಪ್ರದೇಶಗಳಲ್ಲಿ ಇರುತ್ತವೆ. ಇಂತಹ ತಗ್ಗು ಪ್ರದೇಶಗಳನ್ನು ಮಣ್ಣಿನಿಂದ ಮುಚ್ಚುವುದರ ಮೂಲಕ ಕೊಳಚೆ ನೀರು ಹರಿದು ಹೋಗುವಂತೆ ಕಾಲುವೆಗಳನ್ನು ನಿರ್ಮಿಸುವ ಅಗತ್ಯವಿದ್ದು, ಇದರಿಂದ ಮಲೇರಿಯಾ ಹರಡದಂತೆ ನೋಡಿಕೊಳ್ಳಬೇಕು ಎಂದರು.
ಈ ಜಾಗೃತಿ ಜಾಥದಲ್ಲಿ ಮಾಜಿ ಸೈನಿಕ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ದ್ಯಾಮಣ್ಣ, ಶಿಕ್ಷಕರಾದ ಬಿ.ಎಸ್. ಸುರೇಶ್ ಕುಮಾರ್, ಕೆ.ಎ. ಸುರೇಂದ್ರ, ಶಂಕರಲಿಂಗಪ್ಪ, ನಗರ ಆಸ್ಪತ್ರೆ ಆರೋಗ್ಯ ಸಹಾಯಕಿರಾದ ಸುನಂದಮ್ಮ, ಸೌಭಾಗ್ಯಮ್ಮ, ಸುಶೀಲಮ್ಮ, ಆಶಾ ಕಾರ್ಯಕರ್ತರು ಹಾಗೂ ಮಾಜಿ ಸೈನಿಕರು, ಶಾಲಾಮಕ್ಕಳು ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
















