ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: 2019-20ರಲ್ಲಿ ಬೆಳೆ ವಿಮೆ ಪಾವತಿ ಮಾಡಿರುವ ರೈತರಿಗೆ ಕಂಪನಿಯವರು ನಷ್ಟ ಪರಿಹಾರ ಬೆಳೆ ವಿಮೆ ಇಲ್ಲಿಯವರೆಗೂ ನೀಡಿಲ್ಲ. ಈಗಾಗಲೇ ಕಂಪನಿ ಮತ್ತೆ ರೈತರಿಂದ ವಸೂಲಿಗೆ ನಿಂತಿದೆ. ತಾಲ್ಲೂಕಿನ ರೈತರು ಈ ಬಾರಿ ಯಾರು ಬೆಳೆ ವಿಮೆ ಕಟ್ಟಬೇಡಿ ಎಂದು ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಉಪಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಕಿಡಿಕಾರಿದ್ದಾರೆ.
ತಾಲೂಕು ಕಚೇರಿ ಮುಂದೆ ರೈತ ಸಂಘದಿಂದ ಬೆಳೆ ವಿಮೆ ಬಿಡುಗಡೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಕಟ್ಟಿಸಿಕೊಳ್ಳುವ ವಿಮಾ ಕಂಪನಿಗಳು ನಷ್ಟವಾದ ಸಂದರ್ಭದಲ್ಲಿ ಪರಿಹಾರ ಕಲ್ಪಿಸಲು ಮೀನಾಮೇಷ ಎಣಿಸುತ್ತಿವೆ. ಪ್ರತಿ ವರ್ಷವೂ ಹೋರಾಟ ನಡೆಸಿಯೇ ಪರಿಹಾರ ಪಡೆದುಕೊಳ್ಳಬೇಕಿದೆ. ಈ ಬಾರಿಯೂ ಅದೇ ಕಥೆಯಾಗಿದೆ. ಭಿತ್ತನೆ ಬೀಜ, ಗೊಬ್ಬರ ಖರೀದಿಸಲು ರೈತರ ಕೈಯಲ್ಲಿ ಕಾಸಿಲ್ಲ. ಆದರೂ ರೈತರ ವಿಮೆ ಬಿಡುಗಡೆ ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಟಿ.ರಘುಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಜತೆ ಚರ್ಚೆ ನಡೆಸಿದರು. ಸರ್ಕಾರ ಬೆಳೆ ವಿಮೆ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳಬೇಕು. ನಾನು ಸಹಾ ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಜತೆ ಚರ್ಚೆ ನಡೆಸಿದ್ದೇನೆ. ರೈತರು ತಾಳ್ಮೆ ವಹಿಸಿ ಗಡುವು ನೀಡಿದಂತೆಲ್ಲ ಸುಮ್ಮನಿದ್ದಾರೆ. ಮುಂಗಾರು ಮಳೆಯಿಂದ ಭಿತ್ತನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಜಂಟಿ ನಿರ್ದೇಶಕ ಪಿ. ರಮೇಶ್‌ಕುಮಾರ್, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಕೃಷಿ ಉಪ ನಿರ್ದೇಶಕ ಡಾ.ಪ್ರಭಾಕರ್, ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಮಾಜಿ ಅಧ್ಯಕ್ಷ ಚನ್ನಕೇಶವಮೂರ್ತಿ, ರೈತ ಮುಖಂಡರಾದ ಓಬಣ್ಣ, ರಾಜಣ್ಣ, ಯರ್ರಿಸ್ವಾಮಿ, ತಿಪ್ಪೇಸ್ವಾಮಿ, ರಂಗಣ್ಣ, ತಿಮ್ಮಣ್ಣ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post