ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಜ್ಞರ ಮಾಹಿತಿ ಪ್ರಕಾರ ಕೊರೋನಾ ಮೂರನೆಯ ಅಲೆ ಮಕ್ಕಳಿಗೆ ಬರುವ ನೀರಿಕ್ಷೆ ಇದೆ. ಅದರಲ್ಲೂ ಅಪೌಷ್ಟಿಕತೆ ಇರುವ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎನ್ನುವ ಮಾಹಿತಿ ಇರುವುದರಿಂದ ಅವರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಕೊರೋನಾ ನಿಯಂತ್ರಣದ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಗಡಿ ಭಾಗದಲ್ಲಿನ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಆಹಾರ ಸೌಲಭ್ಯವನ್ನು ಒದಗಿಸಬೇಕು. ಮಕ್ಕಳ ಬಗ್ಗೆ ತುಂಬ ಜಾಗ್ರತೆವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರತಿಯೊಬ್ಬರು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಲಸಿಕೆ ಬಗ್ಗೆ ಇರುವ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ನಗರಸಭೆ ಅಧಿಕಾರಿಗಳು ವಾರ್ಡ್‌ಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಚರಂಡಿಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಿಂದ ಸೊಳ್ಳೆಗಳು ಉತ್ಪತಿಯಾಗಿ ಡೆಂಗ್ಯೂ ಹಾಗೂ ಮಲೇರಿಯಾ ರೋಗವು ಹರಡುತ್ತದೆ ಎಂದು ಹೇಳಿದರು.
ಕಳೆದ ತಿಂಗಳು 26 ರಿಂದ ಲಾಕ್‌ಡೌನ್ ಜಾರಿಯಾಗಿತ್ತು. ಆದರೆ, ಇತ್ತೀಚೆಗೆ ಕೊರೋನಾ ಸೋಂಕು ಕಡಿಮೆಯಾಗಿರುವುದರಿಂದ ಜಿಲ್ಲೆಯನ್ನು ಬೆಳಿಗ್ಗೆ 6 ರಿಂದ ಸಂಜೆ 5 ಗಂಟೆವರೆಗೆ ಅನ್‌ಲಾಕ್ ಮಾಡಲಾಗಿದೆ. ಆದರೆ ಸೋಂಕು ಕಡಿಮೆಯಾಗಿದೆ ಎಂದು ಬೇಜವಾಬ್ದಾರಿಯಿಂದ ಸುತ್ತಾಡಬಾರದು. ಎಲ್ಲರೂ ಎಚ್ಚೆತ್ತುಕೊಂಡು ಕೊರೋನಾವನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
.








Discussion about this post