ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಪ್ರೌಢಹಂತದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದುದ್ದಕ್ಕೂ ನಿಯಮಿತವಾಗಿ ಪಠ್ಯ-ಸಹಪಠ್ಯ ಚಟುವಟಿಕೆಗಳನ್ನು ಶಾಲೆಯಲ್ಲಿ ಆಯೋಜಿಸುವುದರಿಂದ ಅವರು ದೈಹಿಕ-ಮಾನಸಿಕವಾಗಿ ಸಧೃಢರಾಗುತ್ತಾರೆ ಎಂದು ಪಿಆರ್‌ಪುರ ಗ್ರಾಪಂ ಅಧ್ಯಕ್ಷೆ ಅನಿತಾವೆಂಕಟೇಶ ಹೇಳಿದರು.
ತಾಲೂಕಿನ ಪರಶುರಾಮಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಸಮಿತಿ ಹಾಗೂ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಇಕೋಕ್ಲಬ್‌ನ ಉದ್ಘಾಟನೆ ಹಾಗೂ ವಿವಿಧ ಚಟುವಟಿಕೆಗಳ ಅನುಷ್ಟಾನ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿ, ಶಾಲಾ ಹಂತದ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಬಿಇಒ ಕೆ.ಎಸ್. ಸುರೇಶ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಎನ್‌ಸಿಇಆರ್‌ಟಿ, ಡಿಎಸ್‌ಇಆರ್‌ಟಿ ಹಾಗೂ ಭಾಷಾ ತಜ್ಞರ ಸಲಹೆಯಂತೆ ಪ್ರಾಥಮಿಕ-ಪ್ರೌಢಹಂತದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಾಮಾಜಿಕ ಬದಲಾವಣೆಗೆ ತಕ್ಕ ಪಠ್ಯಗಳನ್ನು ಹೊಂದಿರುವ ಪುಸ್ತಕಗಳನ್ನು ನೀಡಿರುವುದರಿಂದ ಶಾಲೆಯಲ್ಲಿ ಕೇವಲ ಬೋಧನೆಯಿಂದ ಈ ಎಲ್ಲಾ ಅಂಶಗಳನ್ನು ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಶಾಲೆಯ ವಿವಿಧ ಕ್ಲಬ್‌ಗಳ ಮುಖೇನ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ನಿಯಮಿತವಾಗಿ ಕೈಗೊಂಡು ಮಕ್ಕಳ ಕಲಿಕೆಗೆ ಪೂರಕವಾದ ಶೈಕ್ಷಣಿಕ ಪರಿಸರವನ್ನುಂಟು ಮಾಡುವುದು ಅವಶ್ಯಕ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜಣ್ಣ ಮಾತನಾಡಿ, ಶಾಲೆಯಲ್ಲಿ ಕ್ರೀಡೆ, ಸಾಹಸ ಸೇರಿದಂತೆ ವಿವಿಧ ಕ್ಲಬ್‌ಗಳನ್ನು ರಚಿಸಿ ಅವುಗಳಿಗೆ ವಿದ್ಯಾರ್ಥಿಗಳನ್ನೇ ನಾಯಕರನ್ನಾಗಿಸಿ ಮಾರ್ಗದರ್ಶಕರಾಗಿ ವಿಷಯವಾರು ಶಿಕ್ಷಕರು ಸೂಕ್ತ ಚಟುವಟಿಕೆಗಳನ್ನು ಆಯೋಜಿಸಿದರೆ ಮಕ್ಕಳ ಕಲಿಕೆಯು ಪರಿಣಾಮಕಾರಿಯಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರಸಮನ್ವಯಾಧಿಕಾರಿ ಮಂಜಣ್ಣ ಕೆಪಿಎಸ್‌ನ ಪ್ರಭಾರಿ ಪ್ರಾಚಾರ್ಯೆ ಪುಷ್ಪಾವತಿ, ಉಪ ಪ್ರಾಚಾರ್ಯ ತುಂಗಭದ್ರಪ್ಪ, ಮುಖ್ಯ ಶಿಕ್ಷಕ ಮೂಡಲ ಗಿರಿಯಪ್ಪ, ಗ್ರಾಪಂ ಮಾಜಿ ಸದಸ್ಯ ಗೋಸಿಕೆರೆನಾಗೇಂದ್ರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಕೆ. ಬಸವರಾಜು, ಹನುಮಣ್ಣ, ಮುಖ್ಯಶಿಕ್ಷಕರಾದ ಸೋಮಶೇಖರ, ರಾಮಕೃಷ್ಣಪ್ಪ, ಪ್ರಕಾಶ, ಶಿಕ್ಷಕರಾದ ರಂಗಸ್ವಾಮಿ, ಮಮತಾ, ಇಕೋಕ್ಲಬ್‌ಗಳ ವಿದ್ಯಾರ್ಥಿನಾಯಕರು ಇದ್ದರು
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post