ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಮಹಾತ್ಮ ಗಾಂಧೀಜಿ ಅವರು ಪಾಲಿಸುತ್ತಿದ್ದ ಸತ್ಯ, ಅಹಿಂಸಾ ಮಾರ್ಗ ಹಾಗೂ ಸರಳ ಜೀವನವೇ ಸಮಾಜಕ್ಕೆ ನೀಡಿರುವ ಸಂದೇಶ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಗಂಣದಲ್ಲಿ ತಾಲೂಕು ಆಡಳಿತ ಕಾನೂನು ಸೇವೆಗಳ ಪ್ರಾಧಿಕಾರ ಇವರ ವತಿಯಿಂದ ಗಾಂಧೀಜಯಂತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಚೌರ ಘಟನೆಯಲ್ಲಿ 20 ಪೊಲೀಸರು ಠಾಣೆಯಲ್ಲಿ ಸಜೀವವಾಗಿ ದಹನವಾಯಿತು. ಇದೇ ಹೋರಾಟ ಮುಂದುವರೆದಿದ್ದರೆ ಹಿಂಸಾ ಮಾರ್ಗದ ಮೂಲಕ ಬೇಗನೆ ಸ್ವಾತಂತ್ರ್ಯ ದೊರಕುತ್ತಿತ್ತು. ಇದನ್ನು ಗಾಂಧೀಜಿಯವರು ವಿರೋಧಿಸಿ ಚಳುವಳಿಯ ಹೊಣೆ ಹೊತ್ತು ಐದು ದಿನ ಉಪವಾಸ ಮಾಡಿದರು. ಇದು ಬ್ರಿಟಿಷ್ ಸರ್ಕಾರಕ್ಕೆ ಅಚ್ಚರಿ ಮೂಡಿಸಿತು. ಶಾಂತಿ ಮತ್ತು ಅಹಿಂಸೆ ಸ್ವಾತಂತ್ರ್ಯ ಹೋರಾಟದ ಅಸ್ತ್ರ ಎಂದರು.
ವಿಶ್ವದಾದ್ಯಂತ ನೋಡುತ್ತಿರುವ ಸಿವಿಲ್ ರೈಟ್ ಮುವ್‌ಮೆಂಟ್‌ಗಳು ಪ್ರಥಮವಾಗಿ ಪ್ರಾರಂಭವಾಗಿದ್ದೆ ಮಹಾತ್ಮ ಗಾಂಧೀಜಿ ಅವರಿಂದ. ಅವರ ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ತ್ಯಾಜ್ಯ ವಸ್ತುಗಳ ನಿರ್ವಹಣೆಯ ಚಿಂತನೆಗಳು ಇಂದು ಸಹ ನಾವು ಅಳವಡಿಸಿಕೊಳ್ಳುತ್ತಿರುವ ರೀತಿ ಅವರ ಚಿಂತನೆಗಳಿಗೆ ಹಿಡಿದ ಕನ್ನಡಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಕಾಳಪ್ಪ ಗೋಣಿ, ತಹಶೀಲದ್ದಾರ್ ಎನ್. ರಘುಮೂರ್ತಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಜಗದೀಶ್ ರುದ್ರೇಗೌಡ, ಅಪಾರ ಸಿವಿಲ್ ನ್ಯಾಯಾಧೀಶರಾದ ಮನು ಪಾಟೀಲ್ ಹಾಗೂ ಬಿಇಓ ಕೆ.ಎ. ಸುರೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ಉಪಾಧ್ಯಕ್ಷೆ ಜೈ ತುಂಬಿ ಮಲಿಕ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ನಗರಸಭೆ ಸದಸ್ಯ ವೈ. ಪ್ರಕಾಶ್, ಮಲ್ಲಿಕಾರ್ಜುನ್, ವೀರಭದ್ರಯ್ಯ, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ತಾಲೂಕು ಆಡಳಿತಾಧಿಕಾರಿಗಳು, ತಾಲೂಕು ಕಂದಾಯ ಅಧಿಕಾರಿಗಳು ಇದ್ದರು. ಈ ಸಂದರ್ಭದಲ್ಲಿ ಹಲವು ರಕ್ತದಾನಿಗಳು ರಕ್ತದಾನ ಮಾಡುವುದರ ಮೂಲಕ ಗಾಂಧೀಜಿ ಜನ್ಮದಿನಾಚರಣೆ ಅರ್ಥ ಕಲ್ಪಿಸಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post