ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಸುರಿದ ಭಾರೀ ಮಳೆ, ಬಿರುಗಾಳಿ ಹಾಗೂ ಸಿಡಿಲಿನ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, 4 ಹೋರಿಗಳು, 12 ತೆಂಗಿನ ಮರಗಳು ಸೇರಿದಂತೆ 8 ಮನೆಗಳ ಗೋಡೆ ಮತ್ತು ಮೇಲ್ಚಾವಣೆ ಕುಸಿದು ಬಿದ್ದಿದೆ.
ನಾಯಕನಹಟ್ಟಿ ಹೋಬಳಿಯ ಮಲ್ಲೂರ ಹಳ್ಳಿ ಗ್ರಾಮದ ಜಮೀನಿನಲ್ಲಿರುವ ಮನೆಗೆ ಸಿಡಿಲು ಬಡಿದು ಮೇಲ್ಚಾವಣಿ ಸಂಪೂರ್ಣವಾಗಿ ಮುಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಪರ್ವತಯ್ಯ ಎಂಬ ರೈತರಿಗೆ ಸೇರಿದ ಈ ಮನೆಯಲ್ಲಿ ನಾಗರಾಜ, ಮಲ್ಲೇಶ, ಮಲ್ಲಮ್ಮ ಎಂಬ ಒಂದೇ ಕುಟುಂಬದ ಮೂವರು ಇಲ್ಲಿ ವಾಸವಾಗಿದ್ದು, ಮೇಲ್ಚಾವಣಿ ಕುಸಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಳಕು ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿರುವೆ. ಗಿರಿಯಮ್ಮನ ಹಳ್ಳಿ ಗ್ರಾಮದಲ್ಲಿ ನಾಲ್ಕು ಮನೆಗಳ ಸೀಟು ಹಾರಿಹೋಗಿದೆ.
ಈ ಸಂಬಂಧ ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಮಲ್ಲೂರಹಳ್ಳಿ ಗ್ರಾಮದ ಸರ್ವೇ ನಂ.106ರಲ್ಲಿ ಮನೆಕಟ್ಟಿಕೊಂಡು ಜೀವಿಸುತ್ತಿರುವ ಪರ್ವತಯ್ಯ ಎಂಬ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಮನೆ ಕಳೆದುಕೊಂಡವರಿಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರಾಥಮಿಕ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post