ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೋವಿಡ್ ಪರಿಸ್ಥಿತಿಯನ್ನು ಸ್ವಪ್ರತಿಷ್ಟೆಗೆ ಬಳಸಿಕೊಳ್ಳುತ್ತಿರುವ ಕಸಾಪ ಚುನಾವಣೆಯ ಕೆಲವು ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಕೈಬಿಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜೆ. ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ತುರ್ತಾಗಿ ಮಾಡಬೇಕೆಂದು ಒತ್ತಾಯಿಸುತ್ತಿರುವ ಕೆಲವು ಚುನಾವಣಾ ಅಭ್ಯರ್ಥಿಗಳ ವರ್ತನೆ ಖಂಡಿಸಿ ಇಂದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ತಾಲೂಕು ಕಚೇರಿ ತಹಶೀಲ್ದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿ, ಕೋವಿಡ್-19 ಪರಿಸ್ಥಿತಿಗೆ ಲಕ್ಷಗಟ್ಟಲೇ ಜೀವಗಳು ಬಲಿಯಾಗಿವೆ. ಸಾವಿರಾರು ಕುಟುಂಬಗಳು ಅನಾಥವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮೇ 9ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯನ್ನು ಜನರ ಹಿತಕ್ಕಾಗಿ ಮುಂದೂಡಲಾಗಿದೆ. ಆದರೆ, ಅಭ್ಯರ್ಥಿ ಒಬ್ಬರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಚುನಾವಣೆ ತುರ್ತಾಗಿ ನಡೆಯಬೇಕೆಂದು ಒತ್ತಾಯಿಸಿರುವುದು ಖಂಡನೀಯ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಡಿ.ಈಶ್ವರಪ್ಪ ಮಾತನಾಡಿ, ಕೊರೋನಾ ಅಲೆಗಳ ನಡುವ ಸಾಕಷ್ಟು ಜನ ತೊಂದರೆಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಹಲವರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥತಿಯಲ್ಲು ಚುನಾವಣೆ ಮಾಡಿ ಎನ್ನುತ್ತಿರುವುದು ಸರಿಯಲ್ಲ ಇಂತಹ ಮನಸ್ಥಿತಿ ಇರುವ ಅಭ್ಯರ್ಥಿಯನ್ನು ಕಸಾಪ ಮತದಾರರು ತಿರಸ್ಕಾರ ಮಾಡಬೇಕು. ರಾಜಕೀಯ ಚುನಾವಣೆಯಂತೆ ಕಸಾಪ ಚುನಾವಣೆಯಲ್ಲಿ ಹಣಬಲ ಪ್ರದರ್ಶನ ಮಾಡುತ್ತಿರುವ ಕೆಲ ಅಭ್ಯರ್ಥಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ ಪಿಲಹಳ್ಳಿ ಚಿತ್ರಲಿಂಗಪ್ಪ ಮಾತನಾಡಿ, ಬೇರೆ ಜಿಲ್ಲೆಯವರಾಗಿ ಸ್ಪರ್ಧಿಸಿರುವ ಮತ್ತು ಕೆಲವೇ ದಿನಗಳಲ್ಲಿ ನಿಕಟಪೂರ್ವ ಅಧ್ಯಕ್ಷರಾಗಲಿರುವ ಅಭ್ಯರ್ಥಿಯೊಬ್ಬರು ಚುನಾವಣೆಯನ್ನು ನಾನೇ ಮುಂದೂಡಿಸಿದ್ದು ಎಂದು ಪ್ರಚಾರ ಗಿಟ್ಟಿಸುತ್ತಿದ್ದಾರೆ. ಚುನಾವಣೆಯಲ್ಲಿ ಭಾಗವಹಿಸಿರುವ ಶಿಕ್ಷಕ ಅಭ್ಯರ್ಥಿಗಳು ಸರ್ಕಾರದ ನಿಯಮಗಳನ್ನು ಪಾಲಿಸುವುದು ಕಲಿಯಬೇಕು. ಈಗಾಗಲೇ ಸುಮಾರು ಲಕ್ಷಗಟ್ಟಲೇ ಮೌಲ್ಯದ ಡೈರಿ, ಪೆನ್ನು, ಟೋಪಿ ಪರಿಕರಗಳನ್ನು ಹಂಚಿರುವ ಅಭ್ಯರ್ಥೀಗಳು ಚುನಾವಣೆಗೆ ಆತುರಪಡುತ್ತಿದ್ದಾರೆ. ಇಂತಹ ಅಭ್ಯರ್ಥಿಗಳ ಬಗ್ಗೆ ಸಾಮಾಜಿಕ ಸಂಘಟನೆಗಳು ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೆ. ತಿಪ್ಪೇಸ್ವಾಮಿ ಕೊರ್‍ಲಕುಂಟೆ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಈಶ್ವರಪ್ಪ, ಸಾಮಾಜಿಕ ಹೋರಾಟಗಾರ ಯಾದಲಗಟ್ಟೆ ಜಗನ್ನಾಥ, ರುದ್ರಮುನಿ, ಬಿ. ಗೌರೀಶ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post