ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಮೇ.2ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಕೊರ‌್ಲಕುಂಟೆ ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿನ ತರಾಸು ಪ್ರತಿಮೆಗೆ ಮಾಲಾರ್ಪಣೆ ಮಾಡಿ ತಾಲೂಕು ಕಚೇರಿಗೆ ಆಗಮಿಸಿ ತಹಸೀಲ್ದಾರ್, ಚುನಾವಣಾಧಿಕಾರಿ ಜೆ.ಸಿ. ವೆಂಕಟೇಶಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿ ಪರವಾಗಿ ಸೂಚಕರಾಗಿ ಆಗಮಿಸಿದ್ದ ಹಿರಿಯ ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಹಳಷ್ಟು ಬದಲಾವಣೆ ಅಗತ್ಯವಿದೆ. ನಿಸ್ವಾರ್ಥ ಸೇವಾ ಮನೋಭಾವನೆ ಮತ್ತು ವ್ಯಕ್ತಿಗತ ಸಾಹಿತ್ಯ ಅಭಿರುಚಿ ಉಳ್ಳವರು ಪರಿಷತ್ತಿನ ಅಧಿಕಾರಕ್ಕೆ ಬರಬೇಕು. ಗಡಿಭಾಗದಿಂದ ಕನ್ನಡಪರ ಹೋರಾಟ ಆರಂಭಿಸಿದ ತಿಪ್ಪೇಸ್ವಾಮಿ ಜಿಲ್ಲಾ ರಂಗಮಂದಿರಕ್ಕೆ ಹೆಸರಾಂತ ಕಾದಂಬರಿಕಾರ ತರಾಸು ಅವರ ನಾಮಕರಣ ಮಾಡಬೇಕೆಂದು 72 ಕಿಮೀ ಪಾದಯಾತ್ರೆ ಹೋರಾಟ ಮಾಡಿದ್ದಾರೆ. ಸಾಹಿತ್ಯ ವಲಯಕ್ಕೆ ಕವನ ಸಂಕಲನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕುಗ್ರಾಮ ಕೊರ‌್ಲಕುಂಟೆಯಲ್ಲಿ ಕನ್ನಡ ಸೇವೆಗಾಗಿ ಸ್ವತಃ ಕನ್ನಡ ಮನೆ ಸ್ಥಾಪನೆ ಮಾಡಿಕೊಂಡು ನೂರಾರು ಸಾಹಿತ್ಯಗೋಷ್ಟಿಗಳನ್ನು ಮಾಡಿರುವ ಕೊರ‌್ಲಕುಂಟೆ ತಿಪ್ಪೇಸ್ವಾಮಿ ಅವರ ಆಯ್ಕೆ ಬಯಸಿ ಚುನಾವಣೆ ಪ್ರಕ್ರಿಯೆ ಆರಂಭ ಮಾಡಿದ್ದೇವೆ. ಹೆಸರಾಂತ ಶ್ರೀಕ್ಷೇತ್ರ ನಾಯಕನಹಟ್ಟಿ ತಿಪ್ಪೇಸ್ವಾಮಿ ರಥೋತ್ಸವದ ದಿನದಂದು ನಾಮಪತ್ರ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ತಾಲೂಕು ಅಧ್ಯಕ್ಷ ಯಲಗಟ್ಟೆ ಯೋಗೇಶ, ಕರವೇ ಹೋರಾಟಗಾರ ಟಿ.ಜೆ. ತಿಪ್ಪೇಸ್ವಾಮಿ, ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಆರ್. ದಯಾವತಿ, ಜಿಲ್ಲಾ ನವ ಜಾಗೃತಿ ಕಾರ್ಯದರ್ಶಿ ಯಾದಲಗಟ್ಟೆ ಜಗನ್ನಾಥ, ಕಲಾವಿದ ಗೋಂದಾಳಪ್ಪ, ಹಾಸ್ಯಕವಿ ಜಗನ್ನಾಥ, ದೊಡ್ಡ ಉಳ್ಳಾರ್ತಿ ಗೌರೀಶ, ಸಿ.ಜಿ. ತಿಪ್ಪೇಸ್ವಾಮಿ, ಎಚ್. ಲಂಕಪ್ಪ, ಆರ್. ಮಂಜುನಾಥ, ವಿ. ಬೆಟ್ಟಪ್ಪ, ಭೀಮಣ್ಣ ಮತ್ತಿತರರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post