ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶಿಕ್ಷಣದ ವ್ಯವಸ್ಥೆ ಜೀವನದ ಮೌಲ್ಯ ಮಾನವೀಯ ಮೌಲ್ಯ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸುವುದಲ್ಲದೆ ಮನುಷ್ಯರನ್ನು ಸಂಸ್ಕೃತರನ್ನಾಗಿಸುತ್ತದೆ. ಶಿಕ್ಷವೇ ದೊಡ್ಡ ಶಕ್ತಿ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ಸಾಣಿಕೆರೆ ಗ್ರಾಮದ ಸಮೀಪ ವಸಿಷ್ಠ ಶೈಕ್ಷಣಿಕ ಅಭಿವೃದ್ದಿ ಅಕಾಡೆಮಿ ವೇದ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಾಲ್ಕನೆಯ ವರ್ಷದ ವಾರ್ಷಿಕೋತ್ಸವ ಮತ್ತು ವೇದ ಶಾಲೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೀಡುವ ವೇದ ಕಾಯಕರತ್ನ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಣವೆಂದರೆ ಜೀವನ ಪಾಠವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು ಬೇಕಾದ ಮುಖ್ಯ ಪ್ರಕ್ರಿಯೆ ಶಿಕ್ಷಣ ವ್ಯವಸ್ಥೆಯು ಮಕ್ಕಳು ಶಿಕ್ಷಕರು ಪೋಷಕರು ಅವಲಂಭಿಸಿರುವಂತಹ ಒಂದು ಉತ್ತಮವಾದ ಸಂಯೋಜಿತ ವ್ಯವಸ್ಥೆ ಎಂದರು.
ಗ್ರಾಮೀಣ ಮಟ್ಟದ ಮಕ್ಕಳ ಪ್ರತಿಭೆ ಹೆಚ್ಚಿಸುವ ಸಲುವಾಗಿ ಹಾಗೂ ಹಳ್ಳಿಯಿಂದ ನಗರಗಳಿಗೆ ಮಕ್ಕಳು ಹೋಗುವುದನ್ನು ತಪ್ಪಿಸಿ, ಇಲ್ಲಿಯೇ ಕಲಿಯಲಿ ಎನ್ನುವ ಆಸೆಯೊಂದಿಗೆ ವೇದ ಸಂಸ್ಥೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಈ ಭಾಗದಲ್ಲಿ ಶಾಲೆಯನ್ನು ತೆರೆದು ಮಕ್ಕಳಿಗೆ ವಿದ್ಯೆ ನೀಡುತ್ತಿರುವುದು ಶ್ಲಾಘನೀಯ. ಈ ಶಾಲೆ ಉತ್ತಮ ಮಟ್ಟದಲ್ಲಿ ಬೆಳದು ಗ್ರಾಮೀಣ ಪ್ರದೇಶದ ಶಿಕ್ಷಣದಿಂದ ವಂಚಿತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲಿ ಎಂದರು.
ಖ್ಯಾತಿ ವಾಗ್ಮಿ ಹಾಗೂ ಹಾಸ್ಯ ದಿಗ್ಗಜರಾದ ಪ್ರೊ. ಕೃಷ್ಣೇಗೌಡರ್ ಮಾತನಾಡಿ, ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರು ಮತ್ತು ಕನ್ನಡ ಖ್ಯಾತ ಕಾದಂಬರಿಕಾರ ತ.ರಾ.ಸುಬ್ಬರಾಯ ಇವರು ಜನಿಸಿದಂತಹ ಈ ನಾಡು ನಿಜಕ್ಕೂ ಪುಣ್ಯ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಮಕ್ಕಳು ಓದಿ ತಿಳಿಯಬೇಕು. ನಾಡಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವ ಉದ್ದೇಶದಿಂದ ಶಾಲೆಯನ್ನು ತೆರೆದು ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಈ ಶಾಲೆ ಉತ್ತಮ ಸಹಕಾರಿಯಾಗಲಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅದ್ಬುತವಾದ ಅಕ್ಷರ ಕ್ರಾಂತಿಯಾಗುತ್ತಿದೆ ಎಂದರು.
ವೇದ ಸಂಸ್ಥೆಯ ಅಧ್ಯಕ್ಷ ಡಿ.ಟಿ. ರವೀಂದ್ರ ಮಾತನಾಡಿ, ನಾನು ಕನಸು ಕಟ್ಟಿದಂತೆ ಗ್ರಾಮೀಣ ಭಾಗದ ಮಕ್ಕಳಿಗೆ ಏನಾದರು ಸಹಾಯ ಮಾಡುವ ಉದ್ದೇಶದಿಂದ ವಿದ್ಯಾಸಂಸ್ಥೆಯನ್ನು ಪ್ರಾರಂಬಿಸಿದ್ದೇನೆ. ನಾಲ್ಕನೆಯ ವರ್ಷಕ್ಕೆ ಕಾಲಿಟ್ಟಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಪಿ. ಪ್ರಕಾಶ ಮೂರ್ತಿ, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಆಂಜನೇಯ, ತಾಲೂಕು ಪಂಚಾಯ್ತಿ ಸದಸ್ಯ ಜೆ. ವೀರೇಶ, ನಗರಸಭಾ ಸದಸ್ಯ ವೈ. ಪ್ರಕಾಶ, ಬಿ.ಟಿ. ರಮೇಶ, ರಾಘವೇಂದ್ರ, ವೃತ್ತ ನಿರೀಕ್ಷಕ ಈ. ಆನಂದ್, ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಪಂಚಲಿಂಗೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ವೀರಣ್ಣ, ಮುಖಂಡರಾದ ಪ್ರಸನ್ನ ಶಾನುಭೋಗ, ನಿವೃತ್ತ ಶಿಕ್ಷಕ ಚಂದ್ರಣ್ಣ, ವೇದ ಸಂಸ್ಥೆಯ ಆಡಳಿತಾಧಿಕಾರಿ ಕಿರಣ, ಪ್ರಾಂಶುಪಾಲ ಅಬ್ದಲ್ ವಾಯಿದ್, ಮುಖ್ಯ ಶಿಕ್ಷಕಿ ಗೀತಾ, ಪ್ರಶಾಂತ ಕುಮಾರ್, ರಾಜಣ್ಣ, ಶಾಲಾ ಮಕ್ಕಳು-ಪೋಷಕರು, ಶಾಲಾ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕರೆ)
Get in Touch With Us info@kalpa.news Whatsapp: 9481252093
Discussion about this post