ಚಳ್ಳಕೆರೆ: ಜಾನಪದ ಬುಡಕಟ್ಟು ಸಂಸ್ಕೃತಿಯ ತವರು ಚಿತ್ರದುರ್ಗ ಜಿಲ್ಲೆಯ ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ಜಾತ್ರೆಯಾಗಿ ನಡೆಯವ ಶ್ರೀಕ್ಷೇತ್ರ ನಾಯಕನಹಟ್ಟಿ ಪವಾಡ ಪುರುಷ ಸತ್ತ ಎಮ್ಮೆ ಹಾಲು ಕರೆದ, ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿಯ ಜಾತ್ರಾ ಮಹೋತ್ಸವ ಇಂದು ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ನಡೆಯಿತು.
16 ಮತ್ತು 17 ನೇ ಶತಮಾನದ ಬಳಿ ಬದುಕಿದ ಕರ್ಮ ಜೀವಿ ಕಾಯಕ ಯೋಗಿ ತಿಪ್ಪೇಸ್ವಾಮಿ ಸಮಾಜ ಸುಧಾರಕನಾಗಿ ಜನಕಲ್ಯಾಣಕ್ಕಾಗಿ ತನ್ನನ್ನು ಅರ್ಪಿಸಿಕೊಂಡ ಅವಧೂತ ಶ್ರೀ ತಿಪ್ಪೇರುದ್ರ ಜಾತ್ರೆ ಇಂದು ಲಕ್ಷಾಂತರ ಭಕ್ತರ ನಡುವೆ ಬಹಳ ವಿಜೃಂಭಣೆಯಿಂದ ನಡೆಯಿತು.
ಅಪಾರ ಭಕ್ತರು ಒಳಮಠದಲ್ಲಿ ಸರತಿ ಸಲಿನಲ್ಲಿ ನಿಂತು ತಿಪ್ಪೇರುದ್ರಸ್ವಾಮಿ ದರ್ಶನ ಪಡೆದು ಪುನಿತರಾದರು. ನಂತರ ಹರ್ಷದಿಂದ ತೇರನ್ನು ಎಳೆಯುವುದರ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಹಿನ್ನೆಲೆ:
ಶ್ರೀತಿಪ್ಪೇರುದ್ರ ಸ್ವಾಮಿ ಆಂಧ್ರ ರಾಜ್ಯದಿಂದ ಬಂದು ನಾಯಕನಹಟ್ಟಿಯಲ್ಲಿ ಅನೇಕ ಪವಾಡಗಳನ್ನೂ ಮಾಡುತ್ತ, ನಂಬಿದ ಭಕ್ತರಿಗೆ ಶ್ರಮ ವಹಿಸಿ ದುಡಿಮೆ ಮಾಡುವವರಿಗೆ ಮಾಡಿದಷ್ಟು ನೀಡು ಭಿಕ್ಷೆ ನೀಡಿದ ಮಹಾನ್ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಜಾತ್ರೆ ಬಯಲು ಸೀಮೆಯಲ್ಲಿಯೇ ಬಹಳಷ್ಟು ಹೆಸರಾಗಿದೆ.
ಭಾರತದಲ್ಲಿ ಆಗಿರುವಷ್ಟು ಪವಾಡಗಳು ಮತ್ತು ಬಂದು ಹೋದಷ್ಟು ಪವಾಡ ಪುರುಷರು ಈ ಜಗತ್ತಿನಲ್ಲಿ ಮತ್ಯಾವ ದೇಶದಲ್ಲಿ ಇಲ್ಲ. ಅಂತಹ ಮಹಾಮಹಿಮರಲ್ಲಿ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.
ಈ ಸಮಾಜದ ಓರೆ ಕೋರೆಗಳನ್ನು ತಿದ್ದುವ ಸಲುವಾಗಿ ಸಾಮಾನ್ಯರಂತೆ ಸಾಮಾನ್ಯರ ನಡುವೆ ಬದುಕಿ ಬಾಳಿ ಬೆಳಕಾದ ಪುಣ್ಯ ಪುರುಷ ಶ್ರೀಗುರು ತಿಪ್ಪೇರುದ್ರಸ್ವಾಮಿ.
ಕಾಯಕ ಯೋಗಿಯಾದ ಇವರು ದುಡಿದೇ ಬದುಕಬೇಕೆಂಬ ಸರಳ ಸಹಜ ಮಹತ್ತರ ನಿಯಮವನ್ನು ಸಮಾಜಕ್ಕೆ ಬೋಧಿಸಿದವರು. ಸೋಮಾರಿಗಳಿಗೆ ಪಾಠ ಕಲಿಸಲು ಅವರು ಮಾಡಿದಷ್ಟು ನೀಡು ಭಿಕ್ಷೆ ಎಂಬ ನಿಯಮವನ್ನು ಜಾರಿ ಗೊಳಿಸಿ ಎಲ್ಲರೂ ದುಡಿದು ತಿನ್ನಬೇಕು ಎಂದು ಸಾರಿದರು.
ತಿಪ್ಪೇರುದ್ರ ಸ್ವಾಮಿಯ ಪವಾಡದ ಉದಾಹರಣೆ:
ಒಮ್ಮೆ ಭಕ್ತರೊಬ್ಬರ ಬಳಿ ಹಾಲು ಕೇಳಿದಾಗ ಹಾಲು ಇಲ್ಲ ಎಂದು ಸುಳ್ಳು ಹೇಳಿದರು. ಎಮ್ಮೆ ಸತ್ತೇ ಹೋಯಿತು. ತಪ್ಪನ್ನು ತಿದ್ದಿಕೊಂಡು ಶ್ರೀಗಳ ಬಳಿ ಬಂದಾಗ ಅವರು ಸತ್ತ ಎಮ್ಮೆಯನ್ನು ಬದುಕಿಸಿ ಕೊಟ್ಟರು.
ಬರದಲ್ಲಿ ಬಳಲಿ ಬೆಂಡಾಗಿದ್ದ ಊರಿಗೆ ಎರಡು ಕೆರೆಗಳನ್ನು ಕಟ್ಟಿಸಿ ಮಣ್ಣಿನ ಮಕ್ಕಳ ಜೀವನಕ್ಕೆ ನೆರವಾದರು. ಜಾತಿ, ಕೀಳು ಭಾವನೆಗಳನ್ನು ತೊಡೆದು ಹಾಕುವ ಹಾಕಲು ಸ್ವತಃ ಅವರು ಹರಿ ಜನರ ಮನೆಯಲ್ಲಿ ಶಿವಪೂಜೆ ನೆರವೇರಿಸಿ ಆದರ್ಶ ಮೆರೆದರು. ಇಂಥಹ ಮಹಾನುಭನ ಜಾತ್ರೆ ಇಂದು ನಡೆದಿದೆ. ಲಕ್ಷ ಲಕ್ಷ ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದು ಪುನಿತರಾದರು.
ರಥೋತ್ಸವದ ನಂತರ ಮಣಗಟ್ಟಲೆ ಕೊಬ್ಬರಿ ಸುಡುತ್ತಾರೆ. ಮಿಗಿಲಾಗಿ ಮುಕ್ತಿ ಭಾವುಟ ಹರಾಜು ಮಾಡಲಾಗಿದ್ದು, ಉದ್ಯಮಿ ಸೋಮಣ್ಣ 51 ಲಕ್ಷಕ್ಕೆ ಹರಾಜು ಕೂಗಿ ಮುಕ್ತಿ ಭಾವುಟ ತಮ್ಮದಾಗಿ ಮಾಡಿಕೊಂಡಿದ್ದಾರೆ. ಈ ಮುಕ್ತಿ ಭಾವುಟದ ಹಣ ದೇವರ ಸನ್ನಿಧಿ ಸೇರುತ್ತದೆ. ಶ್ರಿಗುರು ತಿಪ್ಪೇರುದ್ರಸ್ವಾಮಿ ಅವರ ಮಾಡಿದಷ್ಟು ನೀಡು ಭಿಕ್ಷೆ , ಸುಳ್ಳು ಹೇಳಬಾರದು ಮೇಲು-ಕೀಳು ಬೇಧ, ಸಮಾನತೆಯ ಸಮಾಜ ನಿರ್ಮಾಣ ಇವು ನಮ್ಮ ನಡೆ ನುಡಿಗಳಲ್ಲಿ ಬಂದಾಗ ಈ ಮಹಾಪುರುಷರನ ಆರಾಧನೆಗೆ ಒಂದು ಸಾರ್ಥಕವಾದಂತೆ.
ಜಾತಿ ಬೇಧವಿಲ್ಲದೆ ವಿಶೇಷತೆ ಎಂದರೆ ಮುಸ್ಲಿಂ ಬಾಂದವರು ಸಹ ಜಾತ್ರೆಯಲ್ಲಿ ಪಾಲ್ಗೊಂಡು ಜಾತ್ರೆಯನ್ನು ಅದ್ದೋರಿಯಾಗಿ ಮಾಡುತ್ತಾರೆ.
ಈ ಜಾತ್ರೆಗೆ ವಿದೇಶಿಯರು ಆಂಧ್ರದಿಂದ, ತಮಿಳುನಾಡಿನಿಂದ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸಿದರೆ, ಸುತ್ತಮುತ್ತಲಿನ ಹಳ್ಳಿಯ ಭಕ್ತರು ಎತ್ತಿನ ಬಂಡಿ ಕಟ್ಟಿಕೊಂಡು ಬರುತ್ತಾರೆ.
ಈ ವರ್ಷ ಜಾತ್ರೆಯಲ್ಲಿ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿತ್ತು. ವಿಶೇಷವಾಗಿ ಜಿಲ್ಲಾಡಳಿತ ಭಕ್ತರಿಗೆ ಕೊಬ್ಬರಿ ಸುಡಬೇಡಿ, ದೇವಸ್ಥಾನಕ್ಕೆ ನೀಡಿ ಎಂದು ಮನವಿ ಮಾಡುತ್ತಿತ್ತು. ಈ ಜಾತ್ರೆಯಲ್ಲಿ ಗಣ್ಯರು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿಶೇಷ ವರದಿ: ಸುರೇಶ ಬೆಳಗೆರೆ, ಚಳ್ಳಕೆರೆ
Discussion about this post