ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಜಿಲ್ಲೆಯಲ್ಲಿ ಕೊರೋನಾ ಅತಿವೇಗವಾಗಿ ಹರಡುತ್ತಿದ್ದು ಸಮುದಾಯಕ್ಕೆ ಹರಡುವ ಶಂಕೆ ಇದೆ. ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆರು ಮತ್ತು ಅಂಗನವಾಡಿ ಕಾರ್ಯಕರ್ತರು, ಬಹಳಷ್ಟು ಎಚ್ಚರಿಕೆಯಿಂದ ಪ್ರತಿಯೊಬ್ಬರ ಮಾಹಿತಿ ಪಡೆದು ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಗೌರಸಮುದ್ರ ಗ್ರಾಮಪಂಚಾಯಿತಿ ನೋಡಲ್ ಅಧಿಕಾರಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಹೇಳಿದರು.
ತಾಲೂಕಿನ ಗೌರಸಮುದ್ರ ಗ್ರಾಮಪಂಚಾಯಿತಿ ಆವರಣದಲ್ಲಿ ನಡೆದ ಕೋವಿಡ್ 19 ಟಾಸ್ಕ್‌ಫೋರ್ಸ್ ಸಭೆಯಲ್ಲಿ ಕೋವಿಡ್ ಜಾಗೃತಿ ದಳ ಕುರಿತು ಅವರು ಮಾತನಾಡಿದರು.
ಗ್ರಾಮೀಣ ಭಾಗದ ಜನತೆಗೆ ಹೊರಗಿನಿಂದ ಬರುವವರ ಬಗ್ಗೆ ನಿಗಾವಹಿಸಬೇಕು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಕೊರೋನಾ ವೇಗವಾಗಿ ಹರಡುತ್ತಿದ್ದು, ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಸಹ ಪಾಸಿಟಿವ್ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಸಮುದಾಯಕ್ಕೆ ಹರಡಿದರೆ ಮುಂದಿನ ದಿನಗಳಲ್ಲಿ ತೀವ್ರವಾದ ಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದರು.
ಗೌರಸಮುದ್ರ ಗ್ರಾಮಪಂಚಾಯಿತಿ ಪಿಡಿಓ ಹೊನ್ನೂರಪ್ಪ ಮಾತನಾಡಿ, ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು ನಗರದಿಂದ ಬರುವವರ ಮಾಹಿತಿ ಪಡೆದು ಅಂತಹವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಮಾಹಿತಿ ಪಡೆಯಲು ಹೋದಾಗ ಯಾರಾದರೂ ಹಲ್ಲೆ ಮಾಡಲು ಮುಂದಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಗ್ರಾಮ ಲೆಕ್ಕಿಗ ನರೇಂದ್ರಬಾಬು, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ಆರೋಗ್ಯ ಸಹಾಯಕಿ ಸುಜಾತ, ನವೀನ, ಅಂಗನವಾಡಿ ಕಾರ್ಯಕರ್ತೆಯರು, ನೀರುಗಂಟಿಗಳು ಆಶಾ ಕಾರ್ಯಕರ್ತೆಯರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post