ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸೂಕ್ತ ಸಮಯದಲ್ಲಿ ಸರಿಯಾದ ತರಬೇತಿ ಕೊಟ್ಟರೆ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ವಿಜ್ಞಾನಿಗಳಾಗುತ್ತಾರೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.
ಅಜ್ಜಯ್ಯನ ಗುಡಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಸೋಷಿಯಲ್ ಹೆಲ್ಪರ್ ಸರೋಜಮ್ಮ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸತತ ಪರಿಶ್ರಮ ಮತ್ತು ಶ್ರದ್ದೆ ಇದ್ದರೆ ಉತ್ತಮ ಗುರಿ ಸಾಧಿಸಬಹುದು. ಚಳ್ಳಕೆರೆ ಇಂದು ವಿಜ್ಞಾನ ನಗರವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಚಳ್ಳಕೆರೆಯವರೇ ವಿಜ್ಞಾನಿಗಳಾಗಬಹುದೇನೋ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.
ಕೆ.ಸಿ. ರೆಡ್ಡಿ ಸೋಷಿಯಲ್ ಹೆಲ್ಪರ್ ಸರೋಜಮ್ಮ ಫೌಂಡೇಷನ್ ಕಾರ್ಯದರ್ಶಿ ವಸಂತ ಶ್ರೀಕರ ರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆ-ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದ್ದು ಖಂಡನೀಯ ವಿಚಾರ. ಇದು ಸಂಪೂರ್ಣ ನಿಲ್ಲಬೇಕು. ಗಾಂಧೀಜಿ ಕನಸು ಕಂಡಂತೆ ರಾಮರಾಜ್ಯವಾಗಬೇಕು ಎಂದರು.
ಮಕ್ಕಳನ್ನು ಮಕ್ಕಳ ರೀತಿಯಲ್ಲೇ ನೋಡಬೇಕು. ಕಂಡ ಕನಸೆಲ್ಲಾ ನನಸಾಗುವುದಿಲ್ಲ. ಹೀಗಾಗಿ, ಮಕ್ಕಳಿಗೆ ಕೇವಲ ಪಠ್ಯಪುಸ್ತಕಗಳನ್ನು ಓದಿ ಪರೀಕ್ಷೆ ಬರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೇ ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಮುಖ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ. ಈ ಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದು ಸಹಕಾರಿ ಎಂದರು.
ಸಾವಯವ ಕೃಷಿ, ಯಂತ್ರದ ಮಾದರಿ, ಸ್ವಯಂ ಚಾಲಿತ ದೀಪ ನಿರ್ವಹಣೆ, ಸಾರಿಗೆ ವ್ಯವಸ್ಥೆ ಹೀಗೆ ಸಾರ್ವಜನಿಕರಿಗೆ ಉಪಯೋಗವಾಗುವ ವಿಷಯ ವಸ್ತುವುಳ್ಳ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ. ಪ್ರಕಾಶಮೂರ್ತಿ, ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ನಗರಸಭೆ ಸದಸ್ಯೆ ಸುಜಾತ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಪ್ರಮುಖರಾದ ವಸಂತ, ಪ್ರಮೀಳಾ, ಶಿಕ್ಷಣ ಇಲಾಖೆಯ ಪರಿವೀಕ್ಷಕ ಶ್ರೀನಿವಾಸ್, ಬಿ.ವಿ. ನಾಥ, ಈಶ್ವರಪ್ಪ, ಮುಖ್ಯೋಪಾಧ್ಯಾಯ ವೀರಭದ್ರಪ್ಪ, ಕೃಷ್ಣಮೂರ್ತಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post