ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭಿತ್ತನೆ ಮಾಡಿದ ತೊಗರಿ ಬೆಳೆಗೆ ಗೂಡುಮಾರು, ಕಾಯಿಕೊರಕ ಹುಳು ಹಾಗೂ ಬಂಜೆರೋಗ(ವೈರಸ್) ಕಾಣಿಸಿಕೊಂಡಿರುವ ಕಾರಣ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ರೋಗ ಪೀಡಿತ ಬೆಳೆಯನ್ನು ಪರಿಶೀಲಿಸಿದರು.
ಶೇಂಗಾ, ಸಜ್ಜೆ ಬೆಳೆಯಲ್ಲಿ ತೊಗರಿ ಅಕ್ಕಡಿಯಾಗಿ ಬೆಳೆದಿದ್ದಾರೆ. ಇನ್ನು ಕೆಲವರು ಬರೀ ತೊಗರಿಯನ್ನೇ ಪ್ರಧಾನವಾಗಿ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಬೆಳೆಗಾರು ಆತಂಕಪಡುವ ಅಗತ್ಯವಿಲ್ಲ. ೦.೩ ಗ್ರಾಂ ಎಂ.ಎಂ.ಹ್ಯಾಕ್ಸನ್ ಬೆಂಜೋಮಿಯಾವನ್ನು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗ ಹತೋಟಿಗೆ ಬರುತ್ತದೆ ಎಂದು ಹೇಳಿದರು.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಮಾತನಾಡಿ, ಋತುಮಾನೇತರ ನಾಟಿ ಮಾಡಿದ ಈರುಳ್ಳಿ ಬೆಳೆಗೆ ನೇರಳೆ ಹಾಗೂ ಕೊಳೆರೋಗ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆಯಾ ಕಾಲದಲ್ಲೇ ಆಯಾ ಬೆಳೆಗಳನ್ನು ಬೆಳೆಯುವುದನ್ನು ರೈತರು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಕಾಲದಲ್ಲೇ ಭಿತ್ತನೆ ಮಾಡಿದರೆ ಬೆಳೆ ಉತ್ತಮ ಇಳುವರಿ ನೀಡುವುದರ ಮೂಲಕ ಅಧಿಕ ಆದಾಯ ತಂದು ಕೊಡುತ್ತದೆ.
ಹಿಂಗಾರಿನ ನವೆಂಬರ್ ತಿಂಗಳಲ್ಲಿ ಮತ್ತು ಮುಂಗಾರಿನ ಏಪ್ರಿಲ್ ತಿಂಗಳಲ್ಲಿ ಈರುಳ್ಳಿ ಭಿತ್ತನೆ ಮಾಡುವ ಬದಲಿಗೆ ಕೆಲವರು ಅಗಸ್ಟ್ ತಿಂಗಳಲ್ಲಿ ಭಿತ್ತನೆ ಮಾಡಿರುವ ಕಾರಣ ಬೆಳೆ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಅಲ್ಲದೆ ಸುರಿದ ಅಕಾಲಿಕ ಮಳೆಗೆ ಸಿಲುಕಿ ಬೆಳೆಯೂ ನಾಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಕೃಷಿ ಅಧಿಕಾರಿ ಹೇಮಂತಕುಮಾರ್, ರೈತ ಶಿವಕುಮಾರ್, ಮಂಜುನಾಥ, ರಾಜಣ್ಣ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post