ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರಸಭೆಯಲ್ಲಿ ನಡೆಯುವ ಸಾಮಾನ್ಯ ಸಭೆಗಳಲ್ಲಿ ಬಹುತೇಕ ಸದಸ್ಯರು ತೆಲುಗು ಭಾಷೆಯಲ್ಲಿ ಚರ್ಚಿಸುತ್ತಿದ್ದು ಕನ್ನಡ ಭಾಷೆ ಉಳುವಿಗಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ಶಾಸಕ ಟಿ. ರಘುಮೂರ್ತಿ ಮತ್ತು ಪೌರಾಯುಕ್ತ ಪಿ.ಪಾಲಯ್ಯ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಕೊರ್‍ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಒಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಸದಸ್ಯರು ತೆಲುಗು ಭಾಷೆಯಲ್ಲಿ ವಿಷಯ ಚರ್ಚೆ ಮಾಡುತ್ತಿದ್ದ ಸಂದರ್ಭದಲ್ಲಿ ಖಂಡಿಸಲಾಗಿತ್ತು. ಸಭೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತೆಲುಗು ಭಾಷೆ ಬಳಕೆಗೆ ಅವಕಾಶ ಕೊಡುವುದಿಲ್ಲ ಎಂದು ಶಾಸಕರು ಭರವಸೆ ನೀಡಿದ್ದರಾದರೂ, ನಗರಸಭೆಯಲ್ಲಿ ನಡೆಯುವ ಸಭೆಗಳಲ್ಲಿ ಬಹುತೇಕ ಸದಸ್ಯರು ತೆಲುಗು ಭಾಷೆಯ ವ್ಯಾಮೋಹವನ್ನು ಪ್ರದರ್ಶಿಸುತ್ತಿರುವುದ್ನನು ಖಂಡಿಸಿದರು.
ಆಂಧ್ರ ಗಡಿ ಅಂಚಿಗಿರುವ ತಾಲೂಕಿನ ಭಾಗದಲ್ಲಿ ಯಾವುದೇ ಗಡಿ ಸಮಸ್ಯೆ ಇಲ್ಲ. ಇಲ್ಲಿ ದ್ವಿಭಾಷಿಗರ ಸಂಬಂಧ ಇದೆ. ಇದರಿಂದ ದಿನೇದಿನೇ ತೆಲುಗುಭಾಷೆ ಬಳಕೆ ಅಧಿಕವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡಿಗರು ಸದಾ ಜಾಗೃತರಾಗಿರಬೇಕಾಗಿದೆ. ಜನಪ್ರತಿನಿಧಿಗಳು ಕನ್ನಡ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಮತ್ತೊಮ್ಮೊ ಸಭೆಯಲ್ಲಿ ತೆಲುಗು ಭಾಷೆ ಬಳಕೆ ಮಾಡಿದರೆ ಸದಸ್ಯತ್ವ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ನಗರಸಭೆಯ ಕೆಲ ಅಧಿಕಾರಿಗಳಲ್ಲಿ ತೆಲುಗು ಬಳಕೆ ಕಾಣಲಾಗಿದೆ. ಇದರಿಂದ ಸದಸ್ಯರು ತೆಲುಗಿನಲ್ಲಿ ಮಾತನಾಡುವ ಸಂಗತಿ ಇದೆ. ಈ ಕೂಡಲೇ ಪ್ರತಿ ಸದಸ್ಯರಿಗೂ ನೋಟೀಸ್ ಜಾರಿ ಮಾಡಿ ಸಭೆಯಲ್ಲಿ ತೆಲುಗು ಬಳಸದಂತೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಗಡಿಭಾಗದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಸ್ಪಂದಿಸುವ ಜತೆಗೆ ಪ್ರತಿಯೊಬ್ಬರೂ ನಾಡು ನುಡಿಯ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಮಯದಲ್ಲಿ ನಗರಸಭಾ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ಉಪಾಧ್ಯಕ್ಷೆ ಜೈತುಮ್‌ಬೀ, ಪೌರಾಯುಕ್ತ ಪಿ. ಪಾಲಯ್ಯ, ಕಸಾಪ ಸದಸ್ಯ ಪಿ.ಗಂಗಾಧರ, ಕನ್ನಡಪರ ಸಂಘಟನೆಯ ನಗರಂಗೆರೆರವಿ, ಎಚ್.ನಾಗೇಂದ್ರಪ್ಪ, ಎಚ್.ಲಂಕಪ್ಪ, ಬೆಳಗೆರೆ ಸುರೇಶ್, ಎಚ್.ದ್ಯಾಮರಾಜ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post