ಚಳ್ಳಕೆರೆ: ಆದಿಕವಿ ವಾಲ್ಮೀಕಿ ತಮ್ಮ ಅಮೂಲ್ಯ ಕೃತಿ ರಾಮಾಯಣದ ಮೂಲಕ ನೂರಾರು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ರೀವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಯುವಕ ಸಂಘ ಹಮ್ಮಿಕೊಂಡಿದ್ದ ಶ್ರೀ ಮಹರ್ಶಿ ವಾಲ್ಮೀಕಿ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ತಾವು ರಚಿಸಿದ 24 ಸಾವಿರ ಶ್ಲೋಕಗಳ ರಾಮಾಯಣ ವಿಶ್ವಪ್ರಸಿದ್ದಿಯಾಗಿದೆ. ಈ ಕೃತಿಯಲ್ಲಿ ಇಡೀ ಮಾನವ ಜಾತಿಯ ಕಲ್ಯಾಣಕ್ಕೆ ಅಗತ್ಯವಿರುವ ಆದರ್ಶಗಳನ್ನು ಚಿತ್ರಿಸಲಾಗಿದೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಎನಿಸದ ಈ ಬೃಹತ್ ಕೃತಿಯ ಮೌಲ್ಯಗಳು ಮತ್ತು ವಾಲ್ಮೀಕಿಯವರ ಆಶಯಗಳನ್ನು ಇಂದಿನ ಯುವಕರು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಎಂದವರು ತಿಳಿಸಿದರು.
ಜಯಂತಿ ಆಚರಣೆ ಮತ್ತು ಸಂಪ್ರದಾಯಗಳು ಎಲ್ಲಾ ಸಮುದಾಯಗಳು ಸೇರಿ ಆಚರಿಸುವಂತಾಗಬೇಕು. ಹಿಂದುಳಿದ ಪ್ರದೇಶಗಳಲ್ಲಿ ಇಂದಿನ ಪೀಳಿಗೆ ಹೆಚ್ಚು ಜಾಗೃತರಾಗುವ ಮೂಲಕ ಆದರ್ಶ ವ್ಯಕ್ತಿಗಳ ಕನಸುಗಳನ್ನು ನನಸಾಗಿಸಲು ಶ್ರಮಿಸಬೇಕು ಎಂದರು.
ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ರಾಮಾಯಣದಲ್ಲಿ ಬರುವ ಪಾತ್ರಗಳು ನಮ್ಮಲ್ಲಿ ಹೆಚ್ಚಿನ ಆತ್ವವಿಶ್ವಾಸವನ್ನು ತುಂಬುತ್ತವೆ. ಎಂತಹ ಸಂಕಷ್ಟದ ಸಮಯದಲ್ಲಿ ಸಹ ಧೃತಿಗೆಡದೆ ಬದುಕನ್ನು ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕ ಮಹಾಸಭಾ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರ ಸಿಂಹ ಮಾತನಾಡಿ, ಕಾಲುವೇಹಳ್ಳಿ ಗ್ರಾಮದಲ್ಲಿ ಯುವಕರು ಸಂಘಟಿತರಾಗಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯ. ಈ ಉತ್ಸವಕ್ಕೆ ಸಹಕರಿಸಿದ ಇಲ್ಲಿನ ಎಲ್ಲಾ ನೌಕರ ವರ್ಗ, ಸಂಘ ಸಂಸ್ಥೆ ಮತ್ತು ಸ್ತ್ರೀಶಕ್ತಿ ಸಂಘದ ಶ್ರಮ ಅರ್ಥಪೂರ್ಣವಾಗಿದೆ. ನಾಡಿನ ಪ್ರತಿ ಗ್ರಾಮಗಳಲ್ಲಿ ಇಂತಹ ಜಾಗೃತಿ ಅಭಿಯಾನ ಆರಂಭಿಸಿ ಸಮುದಾಯ ಸಂಘಟಿತರಾದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಕಾಲುವೇಹಳ್ಳಿ ಶ್ರೀನಿವಾಸ್ ಮಾತನಾಡಿ, ವಾಲ್ಮೀಕಿ ಮಹರ್ಶಿ ಪ್ರತಿಮೆ ಅನಾವರಣ ಮಾಡುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನು ನಾಡಿನಾದ್ಯಂತ ನಡೆಯುವಂತಾಗಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜೆ.ಪಿ. ಜಯಪಾಲಯ್ಯ ಮಾತನಾಡಿ, ಇಲ್ಲಿನ ರೈತ ಮುಖಂಡ ಕೆ.ಪಿ.ಭೂತಯ್ಯ ಅವರ ಆಶಯದಂತೆ ಸಮುದಾಯ ಭವನ ಕಾಮಗಾರಿ ಆರಂಭಿಸಲು ಅಗತ್ಯ ಅನುದಾನವನ್ನು ಒದಗಿಸಲು ಶ್ರಮಿಸಲಾಗುತ್ತದೆ. ಇದರಿಂದ ಗ್ರಾಮದಲ್ಲಿ ಶುಭ ಕಾರ್ಯಗಳು ನೆರವೇರಲು ಅನುಕೂಲ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
ವಾಲ್ಮೀಕಿ ಧ್ವನಿ ಮಾಸ ಪತ್ರಿಕೆ ಸಂಪಾದಕ ಸೊಂಡೇಕೆರೆ ಶಿವಣ್ಣ ಮಾತನಾಡಿ, ವಾಲ್ಮೀಕಿ ಸಮುದಾಯದಲ್ಲಿ ಹೋರಾಟದ ಗುಣಗಳು ಹುಟ್ಟಿನಿಂದಲೇ ಬಂದಿರುತ್ತವೆ. ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಅಗತ್ಯ ಚಳುವಳಿ ರೂಪಿಸುವ ಅಗತ್ಯವಿದೆ. ವಾಲ್ಮೀಕಿ ಸಮುದಾಯಕ್ಕೆ ಅಗತ್ಯವಿದರು ಶೇ.7.5 ಮೀಸಲಾತಿಯನ್ನು ಸರ್ಕಾರ ಶೀಘ್ರ ನೆರವೇರಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಜೆ.ಸಿ. ಚಂದ್ರಶೇಖರಪ್ಪ, ಉಪಾಧ್ಯಕ್ಷ ಡಾ.ಆರ್. ಗೋಪಾಲಕೃಷ್ಣ, ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಜಿ.ರಂಗಯ್ಯ, ಚಿತ್ರದುರ್ಗ ಮದಕರಿ ನಾಯಕ ವಂಶಸ್ಥ ರಾಜಾ ಪರಶುರಾಮ ನಾಯಕ ಅರಸು, ರಾಜಾ ವೀರ ಮದಕರಿ ನಾಯಕ ಗೌರವ ಸಂರಕ್ಷಣ ವೇದಿಕೆ ಸಂಚಾಲಕ ಕೆ.ಓ. ಮಹಂತೇಶ ನಾಯಕ, ತಾಲೂಕು ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಸೂರನಾಯಕ, ಶಿಕ್ಷಕ ಕೆ.ಪಿ. ತಿಪ್ಪೇಸ್ವಾಮಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರೇಣುಕಮ್ಮ, ಪಿ. ಭೂತಣ್ಣ, ಜಿ.ಟಿ. ರಂಗಸ್ವಾಮಿ, ಪ್ರವೀಣರಾಜ್, ಎನ್. ರಂಗಸ್ವಾಮಿ, ಸೊಪ್ಪಿನ ತಿಪ್ಪೇಸ್ವಾಮಿ, ಕೆ.ಜಿ. ಪಾಲಣ್ಣ, ಆರ್. ಪಾಲಣ್ಣ, ಪಿ. ರಂಗನಾಥ. ಓ. ರವಿಕುಮಾರ್, ಎನ್. ಗಾದ್ರಿಪಾಲಯ್ಯ ಮತ್ತಿತರರ ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093, 94487 22200
Discussion about this post