ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಕ್ಯಾದಿಗುಂಟೆ ಶಿವಣ್ಣರವರ ಕಾಲಮಾನದ ಸೊಬಗು ಕವನ ಸಂಕಲನದಲ್ಲಿ ಗ್ರಾಮೀಣ ಬದುಕಿನ ಅನುಭವಗಳ ಚಿಂತನೆಗಳಿವೆ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಚಿತ್ತಯ್ಯ ಹೇಳಿದರು.
ಬೆಳಗೆರೆ ಶ್ರೀಶಾರದ ಮಂದಿರ ವಿದ್ಯಾ ಸಂಸ್ಥೆ ಮತ್ತು ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಬೆಳಗೆರೆ ಗ್ರಾಮದ ಸೀತಾರಾಮಶಾಸ್ತ್ರೀ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಬೆಳಗೆರೆ ಕೃಷ್ಣಶಾಸ್ತ್ರಿಯವರ 107ನೇ ಜನ್ಮದಿನಾಚರಣೆ ಹಾಗೂ ಕ್ಯಾದಿಗುಂಟೆ ಶಿವಣ್ಣರವರ ಕಾಲಮಾನದ ಸೊಗಡು ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಕೃತಿ, ಕುಟುಂಬ, ಸಂಸಾರಿಕ ಜೀವನದ ಪ್ರೀತಿ, ನಾಡಿನ ಭಾಷೆಯ ಅಭಿಮಾನ, ಬಯಲು ಸೀಮೆಯಲ್ಲಿ ಜರುಗುವ ಜನಪದದ ಆಚರಣೆಗಳ ವೈಚಾರಿಕತೆ ವಸ್ತುವನ್ನು ಒಳಗೊಂಡ ಕವಿತೆಗಳು ಓದುಗರನ್ನು ಸಾಂಸ್ಕೃತಿಕ ಚಿಂತನೆಗೆ ಹಚ್ಚುತ್ತವೆ ಎಂದು ಹೇಳಿದರು.
Also read: ವಿಜಯೇಂದ್ರ ಕೈ ತಪ್ಪಿದ ಪರಿಷತ್ ಟಿಕೆಟ್: ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ್ ಹೊರಟ್ಟಿ ಸ್ಪರ್ಧೆಗೆ ಅವಕಾಶ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ನಮ್ಮೆಲ್ಲರ ನಡುವೆ ಇದ್ದ ಬೆಳಗೆರೆ ಕೃಷ್ಣಶಾಸ್ತ್ರೀಗಳು, ಸಾಮಾಜಿಕ, ಸಾಹಿತ್ಯಿಕ ಹಾಗೂ ಆಧ್ಯಾತ್ಮಿಕ ಅವಿಚ್ಛಿನ್ನ ಪರಂಪರೆಯ ಸಾಧಕ ಜೀವಿಯಾಗಿದ್ದರು. ಕೀರ್ತಿ, ಹಣ, ಅಧಿಕಾರ ಯಾವುದನ್ನೂ ಅರಸದೆ ಬರೀ ಶ್ರಮದಾನ ಸಹಕಾರದ ಮೂಲಕ ನಾಡಿನ ಬಡ ಮಕ್ಕಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಿದ ವಿದ್ಯಾಮಂದಿರದಲ್ಲಿ ನಿರಂತರ ಅಕ್ಷರ ದಾಸೋಹ ನಡೆಯುತ್ತಿರುವುದು ಸಾರ್ಥಕದ ಕೆಲಸ. ಕೃಷ್ಣಶಾಸ್ತ್ರೀಯವರ ಆದರ್ಶ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಅವರ ಕೃತಿಗಳನ್ನು ಓದುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾಸಂಸ್ಥೆ ಮಾಜಿ ಕಾರ್‍ಯದರ್ಶಿ ಶ್ರೀಪಾದ ಪೂಜರ್, ತಮ್ಮ ವೈಯಕ್ತಿಕ ಬದುಕಿನ ಯಾವ ಘಟನೆಗೂ ಮಹತ್ವ ಕೊಡದೆ ಸಾಮಾಜಿಕ ಸೇವೆಯ ಮೂಲಕ ಮಹಾತ್ಮಗಾಂಧಿಯವರ ಕನಸನ್ನು ಸಕಾರಗೊಳಿಸಿದ ವಕ್ತಾರ ಬೆಳಗೆರೆ ಕೃಷ್ಣಶಾಸ್ತ್ರಿಗಳು. ಅವರ ಯೇಗ್ದಾಗೆಲ್ಲಾ ಐತೆ ಎಂಬ ಅಪರೂಪದ ಕೃತಿಯಿಂದಲೇ ವಿದ್ಯಾಮಂದಿರ ನಡೆಯುತ್ತಿರುವುದು ಶ್ಲಾಘನೀಯವಾದುದು. ಹಾಗಾಗಿ ನಾವೆಲ್ಲರೂ ಬೆಳಗೆರೆ ಶಾಸ್ತ್ರೀಗಳು ಹಾಕಿ ಕೊಟ್ಟ ಮಾರ್ಗದಲ್ಲೇ ನಡೆಯಬೇಕು ಎಂದು ಹೇಳಿದರು.
ಆಡಳಿತಾಧಿಕಾರಿ ಕೆ. ರಾಜಣ್ಣ, ಬೆಳೆಗೆರೆ ಮನೆತನದ ಕೃಷ್ಣಶಾಸ್ತ್ರೀಗಳು, ಬರೀ ಉತ್ತಮ ಶಿಕ್ಷಕನಾಗಿರದೆ ಸಮರ್ಥ ಸಮಾಜ ಸೇವಕರಾಗಿದ್ದರು ಎಂದು ಹೇಳಿದರು.
ಉಪನ್ಯಾಸಕ ಶಿವಾನಂದ, ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಜಿಲ್ಲಾ ಪ್ರಧಾನ ಕಾರ್‍ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಕವಿ ಕ್ಯಾದಿಗುಂಟೆ ಜಿ.ಸಿ.ಶಿವಣ್ಣ ಮಾತನಾಡಿದರು. ಮುಖ್ಯ ಶಿಕ್ಷಕ ವಿ.ಎಚ್.ವೀರಣ್ಣ, ಉಪನ್ಯಾಸಕಿ ಉಷಾ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post