ಚಳ್ಳಕೆರೆ: ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ಜರುಗಿತು.
ನಗರದ ಹೃದಯಭಾಗವಾದ ಹಳೇನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಪಾದಗಟ್ಟೆಗೆ ತೆರಳಿ, ವಾಪಸ್ ಸನ್ನಿಧಿಗೆ ತೆರಳಿತು. ನಗರದ ವಿವಿಧೆಡೆಗಳಿಂದ ಭಕ್ತರು ತಂದಿದ್ದ ಬೃಹತ್ ಹೂವಿನ ಹಾರಗಳು ಹಾಗೂ ವೈವಿಧ್ಯಮಯ ಬಣ್ಣಗಳ ಬಾವುಟಗಳಿಂದ ಅಲಂಕರಿಸಲ್ಪಟ್ಟ ರಥದಲ್ಲಿ ಶ್ರೀ ವೀರಭದ್ರಸ್ವಾಮಿಯನ್ನು ಆಸೀನಗೊಳಿಸಿ, ವಿಶೇಷ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಜಯಘೋಷಣೆಗಳೊಂದಿಗೆ ಅಪಾರ ಸಂಖ್ಯೆಯ ಭಕ್ತಸಮೂಹ ಸಮ್ಮುಖದಲ್ಲಿ ರಥದ ಹಗ್ಗಕ್ಕೆ ಕೈ ಹಾಕಿದ ನಂತರ ಪುರಂದರ ವೀರನಾಟ್ಯದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಬಿಸಿಲಿನ ತಾಪವನ್ನು ಲೆಕ್ಕಸದೆ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥ ಬೀದಿಯಲ್ಲಿ ಗಾಂಭೀರ್ಯದಿಂದ ಹೊರಟ ತೇರಿನ ಮುಂಭಾಗ ಮಂಗಳವಾದ್ಯಗಳು, ಕರಡಿ ಮಜಲು, ನಂದಿಕೋಲು, ಕೋಲಾಟ, ಮತ್ತಿತರ ಜಾನಪದ ಕಲಾತಂಡಗಳು ಸಾಥ್ ನೀಡಿದವು.
ಭಕ್ತಿ ಪರವಶರಾದ ಭಕ್ತಸಮೂಹ ಶ್ರೀ ಸ್ವಾಮಿಗೆ ಜಯಕಾರ ಹಾಕುತ್ತಾ ಸೂರುಬೆಲ್ಲ ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಅರ್ಪಿಸಿ ಪುನೀತ ಭಾವದೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಮುಕ್ತಿಬಾವುಟ ಹರಾಜು
ರಥ ಎಳೆಯುವ ಮುಂಚಿತವಾಗಿ ಸ್ವಾಮಿಯ ರಥದ ಮುಕ್ತಿಬಾವುಟವನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹರಾಜು ಹಾಕಿದ್ದು, ಈ ಬಾರಿ ವಾಣಿಜ್ಯೋದ್ಯಮಿ ಕೆ.ಸಿ. ವೀರೇಂದ್ರ 6 ಲಕ್ಷ ರೂ.ಗಳಿಗೆ ಪಡೆದರು.
ರಥೋತ್ಸವದಲ್ಲಿ ಶಾಸಕ ಟಿ. ರಘುಮೂರ್ತಿ, ತಾಪಂ ಸದಸ್ಯ ವೀರೇಶ್, ನಗರಸಭೆ ಸದಸ್ಯ ರಮೇಶ್ ಗೌಡ, ಮಲ್ಲಿಕಾರ್ಜುನ, ಪ್ರಕಾಶ್, ಸೂರನಾಯಕ, ಆರ್.ಪ್ರಸನ್ನ ಕುಮಾರ್, ಜಗದೀಶ್, ಪಾಪಣ್ಣ, ವೃತ್ತ ನಿರೀಕ್ಷಕ ಎನ್. ತಿಮ್ಮಣ್ಣ ಪಿಎಸ್‌ಐ ಕೆ. ಸತೀಶ್ ನಾಯ್ಕ್, ಪ್ರೊಬೇಷನರಿ ಪಿಎಸ್‌ಐ ದೇವರಾಜ, ಜನಪ್ರತಿನಿಧಿಗಳು, ಸದಸ್ಯರು ಪ್ರಮುಖರು ಹಾಜರಿದ್ದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಭಾರೀ ಪೋಲಿಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post