ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಕನ್ನಡದ ಹೆಮ್ಮೆಯ ಸಾಹಿತಿ, ಶ್ರೇಷ್ಠ ಕನ್ನಡತಿ ಡಾ. ಸುಧಾಮೂರ್ತಿ #Sudha Murthy ಕನ್ನಡದ ಅಸಾಮಾನ್ಯ ಸಾಧಕರಾಗಿದ್ದು, ಕನ್ನಡ ಇಂಗ್ಲೀಷ್, ಮರಾಠಿ, ಭಾಷೆಯ ಲೇಖಕರಾಗಿ, ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಸುಧಾಮೂರ್ತಿ ಕನ್ನಡಿಗರ ಶ್ರೇಷ್ಠ ಚಿಂತಕರು, ಸರಳ ಸಜ್ಜನರಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಸುಧಾ ಮೂರ್ತಿ ಅವರ ಸಾಹಿತ್ಯ ಕೊಡುಗೆಗಳು ಹಾಗೂ ಸಮಾಜ ಸೇವೆಯ ಮಹತ್ವ ಕುರಿತು ಅವರು ಮಾತನಾಡಿದರು.
ಸುಧಾಮೂರ್ತಿ ಅವರು ಸುಮಾರು 19ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ . ಅವರ ಕಥೆ ,ಕಾದಂಬರಿ, ಚಿಂತನೆ ಹಾಗೂ ಮಕ್ಕಳ ಸರಣಿಯ ಪುಸ್ತಕಗಳು ವಿಶ್ವ ಪ್ರಸಿದ್ಧಿಯಾಗಿದೆ. ನುಡಿದಂತೆ ನಡೆಯುವ ಆದರ್ಶ ಸರಳ ಬದುಕಿನ ಸುಧಾಮೂರ್ತಿಯವರು ಕನ್ನಡ ನಾಡಿನ ಹೆಮ್ಮೆಯ ತಾಯಿ ಎಂದರು.
ನನ್ನ ಅಜ್ಜಿಗೆ ನಾನು ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು 15 ಭಾಷೆಗೆ ಭಾಷಾಂತರಗೊಂಡಿದೆ. ಅವಿಭಕ್ತ ಕುಟುಂಬದಲ್ಲಿ ಅಜ್ಜಿಯ ಪಾತ್ರ, ಕುಟುಂಬ ನಿರ್ವಹಣೆ, ಅಜ್ಜಿಯ ಪ್ರೀತಿ, ಕರುಣೆ, ವಿಶ್ವಾಸ ನಂಬಿಕೆ, ಧೈರ್ಯ ಎಲ್ಲವನ್ನು ಅರ್ಥಗರ್ಭಿತವಾಗಿ ತಿಳಿಸಿ ಸಮಾಜಕ್ಕೆ ಕುಟುಂಬ ಪ್ರಜ್ಞೆಯನ್ನು ಹೆಚ್ಚಿಸಿರುವ ಸುಧಾ ಮೂರ್ತಿಯವರು ಹಕ್ಕಿಯ ತೆರದಲ್ಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇ ಕಾಂಗಿಗೆ, ಡಾರ್ಲ ಸೊಸೆ, ಋಣ, ಮಹಾಶ್ವೇತೆ, ಮನದ ಮಾತು ಗುಟ್ಟೊಂದು ಹೇಳುವೆ ಮುಂತಾದ ಪುಸ್ತಕಗಳು ಜನಪ್ರಿಯವಾಗಿವೆ ಎಂದರು.
ಅಸಾಮಾನ್ಯ ಸಾಧಕರಾಗಿ ಲೇಖಕರಾಗಿ, ಸಮಾಜ ಸೇವಕರಾಗಿ ದಾನಿಗಳಾಗಿ, ಗ್ರಾಮೀಣ ಅಭಿವೃದ್ಧಿ, ಗ್ರಂಥಾಲಯ, ಶಾಲಾ ಶಿಕ್ಷಣ, ಹಾಗೂ ದಾನಕ್ಕೆ ಹೆಸರಾಗಿ ನಾಡಿನ ಕಷ್ಟಗಳಿಗೆ ಸದಾ ಕಾಲ ಸ್ಪಂದಿಸುವ ಸುಧಾ ಮೂರ್ತಿಯವರು ಅಮೂಲ್ಯವಾದ ನೀತಿಗಳನ್ನು ತಿಳಿಸಿದ್ದಾರೆ. ಸುಧಾ ಮೂರ್ತಿ ಅವರ ಪಂಚ ಸೂತ್ರಗಳು ಜಗತ್ಪçಸಿದ್ಧವಾಗಿದೆ. ಬೇರೆಯವರಿಗೆ ನೆರವಾಗಿ, ದಯೆ ತೋರಿ, ಪರಸ್ಪರ ಶಕ್ತಿ ಮತ್ತು ದೌರ್ಬಲ್ಯವನ್ನು ಸ್ವೀಕರಿಸಿ, ಧನಾತ್ಮಕ ಚಿಂತನೆ ಮಾಡಿ. ನಿಮ್ಮದೇ ರೀತಿಯಲ್ಲಿ ಜೀವನ ಸಾಗಿಸಿ, ಮುಂತಾದ ಅವರ ಚಿಂತನೆಗಳು ಸಮಾಜಕ್ಕೆ ಉನ್ನತವಾದ ಮಾರ್ಗದರ್ಶನ ನೀಡಿದೆ ಎಂದರು.
ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು, ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಪಾರ ಜ್ಞಾನಿಗಳಾಗಿ, ಸರಳ ಸಜ್ಜನ ಬದುಕನ್ನು ನಡೆಸುತ್ತಿರುವ ಸುಧಾ ಮೂರ್ತಿ ನಮ್ಮೆಲ್ಲರ ಹೆಮ್ಮೆ ಎಂದು ಋಗ್ವೇದಿ ತಿಳಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ರಾಜ್ಯ ಅಧ್ಯಕ್ಷ ಶ್ರೀನಿವಾಸ್ ಗೌಡರವರು ಸುಧಾ ಮೂರ್ತಿ ಅವರ ಪುಸ್ತಕದ ಸಾಲುಗಳನ್ನು ಓದುವ ಮೂಲಕ ಉದ್ಘಾಟಿಸಿ, ಆಧುನಿಕ ಪ್ರಪಂಚದಲ್ಲಿ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿ ಸರಳವಾದ ಬದುಕನ್ನು ನಡೆಸುತ್ತಿರುವ ಸುಧಾ ಮೂರ್ತಿಯವರು ಒಂದು ರೀತಿಯಲ್ಲಿ ಮಹಾತ್ಮ ಗಾಂಧಿಯವರAತೆ ಬದುಕಿ, ಸಮಾಜಕ್ಕೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ ಎಂದರು.
ಸರಳತೆಗೆ ಸಾಕ್ಷಿಯಾಗಿರುವ ಸುಧಾ ಮೂರ್ತಿ ಆಡಂಬರದ ಜೀವನದಿಂದ ದೂರವಿರುವಂತೆ ಯುವಕರಿಗೆ ಸದಾ ಕಾಲ ದಾರಿದೀಪವಾಗಿದ್ದಾರೆ. ಅಹಂಕಾರವನ್ನು ಬಿಟ್ಟು, ಸರಳತೆಯ ಮೂಲಕ ಶ್ರೇಷ್ಠ ಬದುಕನ್ನು ನಡೆಸಬಹುದು ಎಂಬುದು ಸುಧಾಮೂರ್ತಿ ಅವರ ಜೀವನ ಮತ್ತು ಬದುಕಿನಿಂದ ಅರ್ಥವಾಗುತ್ತದೆ ಎಂದು ತಿಳಿಸಿದರು.
ಭಾರತ ದೇಶದ ಪ್ರಮುಖ ಸಮಾಜಸೇವಕರಾಗಿ ಕಲೆ ಸಾಹಿತ್ಯ, ಸಂಗೀತ, ಶಿಕ್ಷಣ, ಕಂಪ್ಯೂಟರ್ ಎಲ್ಲ ಕ್ಷೇತ್ರಗಳಲ್ಲಿ ಅವರ ಸೇವೆ ಮರೆಯಲಾಗದು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರು ಸುಧಾ ಮೂರ್ತಿ ಅವರ ಸಾಹಿತ್ಯ ಕೊಡುಗೆ ಮತ್ತು ಸಮಾಜ ಸೇವೆ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿ ಸಮಾಜಕ್ಕೆ ಅರ್ಥಗರ್ಭಿತವಾದ ಕಾರ್ಯಕ್ರಮವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ರವರು ಸುಧಾ ಮೂರ್ತಿ ಅವರ ಜನ್ಮದಿನದ ಅಂಗವಾಗಿ ಸಿಹಿ ಹಂಚಿ ಪುಸ್ತಕಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್, ಬಿಕೆ ಆರಾಧ್ಯ, ಸರಸ್ವತಿ, ಶಿವಲಿಂಗ ಮೂರ್ತಿ, ಪಣ್ಯದ ಹುಂಡಿ ರಾಜು, ಮಹೇಶ್ ಗೌಡ, ಸುರೇಶ್ ಗೌಡ, ಮನೋಜ್, ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post