ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಸಾವಿರಾರು ಪ್ರೇಕ್ಷಕರ ಹರ್ಷೋದ್ಗಾರದ ಮಧ್ಯೆ ಚಂದ್ರಗುತ್ತಿ ಸಮೀಪದ ಚಕ್ಕಮಾಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವು ವಿಜೃಂಭಣೆಯಿಂದ ನಡೆಯಿತು.
ಗ್ರಾಮೀಣ ಪ್ರದೇಶದಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈ ನಮಿರೇಳಿಸಿತು.
ಜನಪದ ಸಂಸ್ಕೃತಿಯ ಪ್ರತೀಕ ಹಾಗೂ ಸಾಂಪ್ರದಾಯಿಕವಾಗಿ ನಡೆದ ಹಬ್ಬದಲ್ಲಿ ಪಾಲ್ಗೊಳ್ಳಲು ನೂರಾರು ಹೋರಿಗಳು ಬಂದಿದ್ದವು. ಮಾಲೀಕರು ತಮ್ಮ ಹೋರಿ ಸುಂದರವಾಗಿ ಕಾಣಲು ಬಣ್ಣದ ಟೇಪು, ಕಾಲ್ಗೆಜ್ಜೆ, ಜೂಲಾ, ಬಲೂನ್ ಸೇರಿ ವಿವಿಧ ಅಲಂಕಾರಿಕ ವಸ್ತುಗಳಿಂದ ಅವುಗಳನ್ನು ಸಿಂಗರಿಸಿದ್ದರು. ಅಖಾಡದಲ್ಲಿ ಶಿಕಾರಿಪುರದ ಹಿಟ್ಲರ್, ಮಂಗಳೂರು ಮಲೆನಾಡು ಬಸವ, ಶ್ರೀ ರೇಣುಕಾಂಬ ಎಕ್ಸ್ಪ್ರೆಸ್, ಚಿಕ್ಕಾವಲಿ ಶೋಕದಾರ್, ಈಡಿಗರ ದರ್ಬಾರ್, ವಾಯುಪುತ್ರ, ಚಿಕ್ಕಮಾಕೊಪ್ಪದ ಸೀತಾರಾಮೇಶ್ವರ, ಜೈ ಹನುಮಾನ್, ಭದ್ರಾಪುರದ ಬಿ ಆರ್.ಪಿ.ಕಿಂಗ್, ಬಿ.ಆರ್ ಪಿ ಬ್ರಹ್ಮ, ಹೊಸೂರ್ ಕಿಂಗ್, ಒಡೆಯ, ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ. ಜನತೆ ಅದನ್ನು ನೋಡಿ ರೋಮಾಂಚನಗೊಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.
Also read: 2022-23ನೇ ಸಾಲಿನ ಕುವೆಂಪು ವಿವಿ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಉತ್ತಮ ಪ್ರತಿಕ್ರಿಯೆ
ಹೋರಿ ಹಬ್ಬ ಆಯೋಜಿಸಿದ್ದ ಶ್ರೀರಾಮೇಶ್ವರ ಗೆಳೆಯರ ಬಳಗದವರು ಸುರಕ್ಷಿತವಾದ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದ್ದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಿಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳನ್ನು ಹಾಗೂ ಬಲ ಪ್ರದರ್ಶನ ತೋರಿಸಿದ ಪೈಲ್ವಾನರನ್ನು ಗುರುತಿಸಲಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















