ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಜಮೀನಿಗೆ ಬೆಂಕಿ ತಗುಲಿ ಲಕ್ಷಾಂತರ ರೂ., ಮೌಲ್ಯದ ಬೆಳೆ ಸುಟ್ಟು ಕರಕಾಗಿರುವ ಘಟನೆ ಸಮೀಪದ ಕಮರೂರು ಗ್ರಾಮದಲ್ಲಿ ನಡೆದಿದೆ.
ಕಮರೂರು ಗ್ರಾಮದ ಸರ್ವೆ ನಂಬರ್ 77ರಲ್ಲಿನ ಅಬುಜರ್ ಮಹಮದ್ ಇಸಾಕ್ ಎಂಬುವರ 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ನಾಲ್ಕು ಎಕರೆ ಪ್ರದೇಶದಲ್ಲಿನ ಅನಾನಸ್, ನಾಲ್ಕು ಎಕರೆ ಪ್ರದೇಶದ ಶುಂಠಿ, ಸುಮಾರು 40 ತೆಂಗಿನ ಮತ್ತು ಅಡಿಕೆ ಗಿಡಗಳು ಹಾಗೂ ಜಮೀನಿನಲ್ಲಿ ಅಳವಡಿಸಿದ್ದ ಪೈಪ್ ಲೈನ್‌ಗಳು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 15 ಲಕ್ಷ ರೂ., ನಷ್ಟವಾಗಿದೆ. ಜೊತೆಗೆ ಬೆಂಕಿ ಝಳಕ್ಕೆ ಅಡಿಕೆ ಗಿಡಗಳು ಸಹ ಒಣಗಿ ಹೋಗಿವೆ.
ಶುಕ್ರವಾರ ಮಧ್ಯಾಹ್ನದ ಸಂದರ್ಭದಲ್ಲಿ ಜಮೀನಿನಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಜಮೀನಿಗೆ ಆವರಿಸಿತು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೂ, ಅಷ್ಟರಲ್ಲಾಗಲೇ ಲಕ್ಷಾಂತರ ರೂ., ಮೌಲ್ಯದ ಬೆಳೆ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿತ್ತು.
ಜಮೀನಿನ ಮಾಲಿಕ ಅಬುಜರ್ ಮಹಮದ್ ಇಸಾಕ್ ಅವರ ಪುತ್ರ ಮುಕೀಂ ಮಾತನಾಡಿ, ಶುಕ್ರವಾರ ಮಧ್ಯಾಹ್ನದ ವೇಳೆಗೆ ಜಮೀನಿಗೆ ಬೆಂಕಿ ತಗುಲಿದ ವಿಷಯ ತಿಳಿಯಿತು. ಸಮೀಪದಲ್ಲಿರುವ ಸಾಯಿ ಬಾಬಾ ಟ್ರಸ್ಟ್ನವರು ಅಗ್ನಿಶಾಮಕ ಠಾಣೆಗೆ ವಿಷಯಕ್ಕೆ ತಲುಪಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್ ವೇಳೆ ಲಕ್ಷಾಂತರ ರೂ., ನಷ್ಟ ಅನುಭವಿಸಿದ್ದೆವು. ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಬೆಳೆ ಕೈಗೆ ತಲುಪುವ ನಿರೀಕ್ಷೆಯಲ್ಲಿದ್ದೆವು. ಆದರೆ, ಬೆಂಕಿ ಎಲ್ಲವನ್ನು ಬಲಿ ತಗೆದುಕೊಂಡಿದೆ. ಸರ್ಕಾರ ಬೆಂಕಿಯಿಂದ ನಷ್ಟವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















