ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ನೀಡುವ ನಮ್ಮ ಯಾವುದೇ ಸೇವೆಗಳು ನಮಗರಿವಿಲ್ಲದಂತೆ ಸಾರ್ಥಕವಾಗಿರುತ್ತದೆ. ಸೇವಾ ಮನೋಭಾವ ಪ್ರಾಥಮಿಕ ಹಂತದಲ್ಲಿ ಜಾಗೃತಗೊಂಡರೆ ಮುಂದೊಮ್ಮೆ ಸಮಾಜದ ಸುಧಾರಣೆಗೆ ನೆರವಾಗುತ್ತದೆ ಎಂದು ಪರ್ಯಾವರಣ ಗತಿ ವಿಧಿ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಚಂದ್ರಗುತ್ತಿ ಪ್ರೌಢಶಾಲಾ ಆವರಣದಲ್ಲಿ ಸ್ಪೂರ್ತಿ ಸ್ನೇಹಿತರ ಬಳಗ ಹಾಗೂ ಶಾಲಾಡಳಿತ, ಅರಣ್ಯ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ ವೃಕ್ಷಾರೋಪಣ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪರಿಸರ ಎಂದ ಕೂಡಲೇ ಕೇವಲ ಗಿಡಮರಗಳ ಜಾಗೃತಿಯಷ್ಟೆ ಅಲ್ಲ, ನಮ್ಮ ಸಂಸ್ಕೃತಿಯ ಜಾಗೃತಿಯೂ ಬೇಕಾಗುತ್ತದೆ. ಸಂಸ್ಕೃತಿ ಮತ್ತು ಸಂಸ್ಕಾರಗಳು ವಿದ್ಯಾರ್ಥಿ ದಿಸೆಯಿಂದಲೆ ದೊರೆಯಬೇಕು. ಇಂತಹ ಸಂಸ್ಕಾರ ದೊರೆತಿದ್ದಕ್ಕೆ ಸಾಕ್ಷಿಯಾಗಿ ಇದೇ ಶಾಲೆಯಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಸ್ಪೂರ್ತಿ ಬಳಗ ರಚಿಸಿಕೊಂಡು ಜ್ಞಾನ ದೇಗುಲಕ್ಕೆ ಅರ್ಥಪೂರ್ಣ ನಮನ ಸಲ್ಲಿಸಿದ್ದಾರೆ. ಈ ನೆಲೆಯ ಋಣವನ್ನು ವಿವಿಧ ಸಾಮಾಜಿಕ ಕಾರ್ಯದ ಮೂಲಕ ತೀರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ, ಈ ಸಂಘಟನೆ ದೇಶಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.
ನಿವೃತ್ತ ಶಿಕ್ಷಕಿ ವಿನೋದ ಅರ್ಚಕ್ ಮಾತನಾಡಿ, ಶೈಕ್ಷಣಿಕ ಹಂತದ ಜ್ಞಾನ ಸ್ಥಳೀಯ ಪರಿಸರಕ್ಕೆ ಪೂರಕವಾಗಿದ್ದರೆ ಅಲ್ಲಿನ ಪರಿಸರ ಹೆಚ್ಚು ಘಾಸಿಗೊಳಗಾಗುವುದಿಲ್ಲ. ಅಂತರ್ಜಲ ವೃದ್ಧಿಗೆ, ಶುದ್ಧ ಗಾಳಿಗೆ ಮಾರಕವಾಗಿರುವ ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಬಿಸಾಕ ಬಾರದು, ಯಾವುದೇ ಕಾರಣಕ್ಕೂ ಬೆಂಕಿ ಹಚ್ಚದೆ ಒಂದೆಡೆ ಗುಂಡಿಯಲ್ಲಿ ಹೂಳಿ ಅಥವಾ ರಿಸೈಕಲ್ ಗೆ ಬಳಸಿ ಎಂದರು. ಶಾಲೆಯ ಮಕ್ಕಳು ಶಾಲೆಯ ಆವರಣದಲ್ಲಿ ನೆಟ್ಟಿರುವ ಗಿಡಗಳನ್ನು ಕಾಪಾಡಿಕೊಳ್ಳುವ ಸಂಕಲ್ಪ ಮಾಡಿದರು.

ಶ್ರೀ ರೇಣುಕಾಂಬ ದೇವಸ್ಥಾನ ಆವರಣದಲ್ಲಿ ಹಲವಾರು ಜಾತಿಯ ಗಿಡಗಳನ್ನು ನೀಡಲಾಯಿತು. ಪುರಾಣ ಪ್ರಸಿದ್ಧ ಕ್ಷೇತ್ರಕ್ಕೆ ಇಲ್ಲಿಗೆ ಬರುವ ಭಕ್ತಾದಿಗಳು ಗಿಡನೆಡುವ ಮೂಲಕ, ಪ್ಲಾಸ್ಟಿಕ್ ಬಿಸಾಡದೆ ಪರಿಸರ ಕಾಯ್ದುಕೊಳ್ಳುವ ಮೂಲಕ ಸಹಕರಿಸಬೇಕು ಎಂದು ಪರಿಸರಾಸಕ್ತರು ಕೋರಿಕೊಂಡರು.
ಸ್ಪೂರ್ತಿ ಸ್ನೇಹಿತರ ಬಳಗದ ಪ್ರತಿಯೊಬ್ಬ ಸದಸ್ಯರ ಸಹಕಾರ ಮತ್ತು ಪರಿಶ್ರಮದಿಂದ ಇಂತಹ ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಚಿಂತನೆ ನಮ್ಮದಾಗಿದೆ.
ವೀಣಾ ಶಶಿಧರ್ ಹೆಗಡೆ ಸ್ಪೂರ್ತಿ ಸ್ನೇಹಿತರ ಬಳಗದ ಅಧ್ಯಕ್ಷೆ

ವರದಿ: ಮಧುರಾಮ್, ಸೊರಬ












Discussion about this post