ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶ ಮಾದರಿಯಲ್ಲಿ ಕಬಡ್ಡಿ ಕ್ರೀಡೆ ಆಯೋಜಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಚ್. ಗಣಪತಿ ಹುಲ್ತಿಕೊಪ್ಪ ಹೇಳಿದರು.
ಸಮೀಪದ ಬಸ್ತಿಕೊಪ್ಪ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ದೇಶದಲ್ಲಿಯೇ ಮಹತ್ವವನ್ನು ಪಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ವೇದಿಕೆಯ ಅವಶ್ಯಕತೆ ಇದೆ. ಇಂತಹ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದರು.
ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಎಂ.ಪಿ. ರತ್ನಾಕರ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಿದೆ. ಗ್ರಾಮೀಣ ಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವಂತಹ ಪ್ರತಿಭೆಗಳಿದ್ದಾರೆ. ಕ್ರೀಡಾಪಟುಗಳಲ್ಲಿ ತಮ್ಮಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ಕ್ರೀಡೆಕೂಟದಲ್ಲಿ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಕರೆ ನೀಡಿದರು.
ಗ್ರಾಮದ ಹಿರಿಯರಾದ ಕೆರಿಯಪ್ಪ ಮೈಲಾನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದಿನೇಶ್, ಮೋಹನ್ ಕಾನಡೆ, ರಾಘವೇಂದ್ರ ಆಟೋ, ಚಂದ್ರಪ್ಪ, ದೇವೇಂದ್ರಪ್ಪ, ಅರುಣ್ ಕಾನಡೆ, ಗೆಳೆಯರ ಬಳಗದವರು, ಗ್ರಾಮಸ್ಥರು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಪ್ರೇಕ್ಷಕರು ಪಾಲ್ಗೊಂಡಿದ್ದರು.
ನಂತರ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವನ್ನು ಸಂಜೀವಿನಿ ಬಾಯ್ಸ್ ಸಿದ್ದಾಪುರ ತಂಡ, ದ್ವಿತೀಯ ಸ್ಥಾನ ಜಡ್ಡಿಗದ್ದೆ ತಂಡ, ತೃತೀಯ ಸ್ಥಾನ ಶ್ರೀ ಮಾರಿಕಾಂಬ ಬೆನ್ನೂರು ತಂಡ, ಚತುರ್ಥ ಬಹುಮಾನವನ್ನು ಚಿಕ್ಕಮಾಕೊಪ್ಪ ತಂಡದವರು ಪಡೆದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















