ಕಲ್ಪ ಮೀಡಿಯಾ ಹೌಸ್
ಚನ್ನಗಿರಿ: ತಾಲ್ಲೂಕಿನ ಮತ್ತಿ ಹಾಗೂ ಕುಕ್ಕವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಾಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಸ್ವಾತಂತ್ರ್ಯ ಭಾರತದ ಮಹತ್ವ ಪೂರ್ಣ ಯೋಜನೆಯಾಗಿದ್ದು ಗ್ರಾಮೀಣ ಭಾಗವು ಮೂಲಭೂತ ಸೌಕರ್ಯದೊಂದಿಗೆ ಸಮಗ್ರವಾಗಿ ಅಭಿವೃದ್ದಿ ಹೊಂದಬೇಕಾದರೆ, ಉದ್ಯೋಗ ಇಲ್ಲದೆ ಪರಿತಪಿಸುವ ಸಾಮಾನ್ಯರಿಗೆ, ವಿಶೇಷವಾಗಿ ರೈತರ ಹೊಲಗಳಿಗೆ ಹೋಗಲು ಅವಶ್ಯಕತೆ ಇರುವ ರಸ್ತೆಗಳ ಅಭಿವೃದ್ದಿ ಪಡಿಸಲು “ನಮ್ಮ ಹೊಲ ನಮ್ಮ ರಸ್ತೆ” ಯೋಜನೆಯಡಿ ರಸ್ತೆಗಳನ್ನು ದುರಸ್ತಿ ಮಾಡಿಸುವುದು, ಮಣ್ಣಿನ ಕೊರೆತ ತಪ್ಪಿಸಲು ಕಲ್ಲುಕಟ್ಟದ ನಿರ್ಮಾಣ ಮಾಡಲು, ಜಮೀನಿನ ಒಳಗೆ ಕಾಲುವೆಗಳನ್ನು ತಗೆಸಲು, ನಿಗದಿತ ಸಮುದಾಯಕ್ಕೆ ನೂತನ ತೋಟ ಕಟ್ಟಲು, ಸೋಪಾನ ಕಟ್ಟೆ ನಿರ್ಮಾಣ ಹಾಗೂ ಇನ್ನಿತರ ಹಲವಾರು ಪ್ರಮುಖ ಯೋಜನೆಗಳು ಜಾರಿಯಲ್ಲಿದ್ದು, ಪ್ರತಿಯೊಂದು ಕೆಲಸಗಳನ್ನು ಆಯಾ ಇಲಾಖೆಗಳು ಮಾಡಬೇಕು ಎಂಬ ಧೋರಣೆ ಕೈಬಿಡಬೇಕು, ನಮ್ಮ ಮನೆಯ ಯಜಮಾನ ಒಂದು ತಿಂಗಳು ದುಡಿಮೆ ಇಲ್ಲದೆ ಮನೆಯಲ್ಲಿ ಕುಳಿತುಕೊಂಡರೆ ನಮಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ ಅಂತಹದರಲ್ಲಿ ಕಳೆದ ಒಂದು ವರ್ಷದಿಂದ ಕೋವಿಡ್ -19 ಮಹಾಮಾರಿಯಿಂದ ರಾಜ್ಯವು ತತ್ತರಿಸಿದ ಪರಿಣಾಮ ಆರ್ಥಿಕ ಹಿಂಜರಿತ ಅನುಭವಿಸಿದೆ ಇಂತಹ ಸಂದಿಗ್ಧ ಸಮಯದಲ್ಲಿ ಸರ್ಕಾರದ ಜೊತೆಗೆ ನಾವೆಲ್ಲರೂ ನಿಲ್ಲಬೇಕು ಜೊತೆಗೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು ಇದಕ್ಕೆ ನರೇಗಾ ಯೋಜನೆ ಉತ್ತಮ ನಿದರ್ಶನ ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ನಂತರ ಮಾತನಾಡಿದ ಸ್ಥಳೀಯ ರೈತರು ಇದುವರೆಗೂ ನಾವು ಕಾಡಾ ಅಧ್ಯಕ್ಷರನ್ನು ನಮ್ಮ ಭಾಗದಲ್ಲಿ ನೋಡಿರಲಿಲ್ಲ, ನಮ್ಮ ಸಮಸ್ಯೆ ಖುದ್ದು ಆಲಿಸಿರಲಿಲ್ಲ ನೀವು ನಾಲೆಯ ಮೇಲೆ ಬಂದಿರುವುದಲ್ಲದೇ ನಮ್ಮ ಸಮಸ್ಯೆಗೆ ಕಿವಿ ಗೊಟ್ಟು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.
ಕಳೆದ 25 ವರ್ಷಗಳಿಂದ ಭದ್ರಾ ಅಚ್ಚುಕಟ್ಟಿನ ಕೊನೆಯಂಚಿನ ಭಾಗಗಳಲ್ಲಿರುವ ರೈತರು ಬೇಸಿಗೆ ಬೆಳೆ ಪಡೆದುಕೊಳ್ಳಲು ಅಧಿಕಾರಿಗಳ ವಿರುದ್ಧ ನಿರಂತರ ಹೋರಾಟ ಮಾಡಬೇಕಿತ್ತು, ಮನೆ ಮಠ ತೊರೆದು ರಾತ್ರಿ ನಿದ್ದೆ ಬಿಟ್ಟು ನೀರು ಹಾಯಿಸಿಕೊಳ್ಳಬೇಕಿತ್ತು ಆದರೆ ನೀವು ಅಧ್ಯಕ್ಷರಾಗಿ ಬಂದ ಮೇಲೆ ಒಂದು ದಿನವು ಯಾವುದೇ ರೀತಿಯ ಸಮಸ್ಯೆ ಎದುರಾಗದೇ ನೀರು ಸರಾಗವಾಗಿ ಹಾಯಿಸಿಕೊಂಡಿದ್ದು ಒಂದು ಪವಾಡದಂತೆ ನಡೆದಿದೆ, ಇಷ್ಟು ವರ್ಷ ಅದೇ ಜಲಾಶಯ ಅದೇ ಅಧಿಕಾರಿಗಳ ವರ್ಗ ಕಾರ್ಯ ನಿರ್ವಹಿಸಿದರು ಆಗದ ಕೆಲಸ ಒಬ್ಬ ಹೆಣ್ಣು ಮಗಳಾಗಿ ನೀವು ಮಾಡಿರುವುದು ನಮೆಗೆಲ್ಲ ಅಪಾರ ಅಭಿಮಾನ ತಂದಿದೆ ಎಂದು ಮನದಾಳದ ಪ್ರೀತಿ ವ್ಯಕ್ತಪಡಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ತೇಜಸ್ವಿ ಪಟೇಲ್ ಮಾತನಾಡಿ, ಪ್ರಾರಂಭದ ದಿನಗಳಲ್ಲಿ ಅಧ್ಯಕ್ಷರ ಮಾತು ನನಗೆ ಅನಾನುಭವಾದ ಹೇಳಿಕೆ ಎಂದು ನಂಬಿದ್ದ ನಾನು ಅದನ್ನು ಸುಳ್ಳಾಗಿಸಿ ಮುಂಬರುವ ಅಧ್ಯಕ್ಷರಿಗೆ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ನೀರನ್ನು ಹೇಗೆ ಕೊನೆಯಂಚಿನ ರೈತರಿಗೆ ತಲುಪಿಸಬೇಕು, ಅಧಿಕಾರಿಗಳಿಂದ ಹೇಗೆ ಕೆಲಸ ತಗೆಸಿಕೊಳ್ಳಬೇಕು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಇದು ಎಲ್ಲರಿಗೂ ಮಾದರಿ ಎಂದರು.
ನೀವು ಅಧಿಕಾರದಲ್ಲಿ ಇರುವವರೆಗೂ ರೈತರ ಏಳ್ಗೆಗೆ ಶ್ರಮಿಸುವ ಮೂಲಕ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಿರಾ ಎಂಬ ನಂಬಿಕೆ ನಮ್ಮಲ್ಲಿ ಬೇರೂರಿದೆ, ಮುಂದಿನ ದಿನಗಳಲ್ಲಿ ಸರ್ಕಾರ ಅನುದಾನ ನೀಡಿದಂತೆ ಅಚ್ಚುಕಟ್ಟಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುವ ಜೊತೆಗೆ ಕೊನೆಯಂಚಿನ ರೈತರು ನೆಮ್ಮದಿಯ ಜೀವನ ನಡೆಸಲು ಸಹಕಾರಿ ಯಾಗುತ್ತಿರಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮಂಜುನಾಥ್, ದಿನೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾರಾಯಣ ಸ್ವಾಮಿ, ಸಹಾಯಕ ಅಭಿಯಂತರ ಮಧು ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post