ಕಲ್ಪ ಮೀಡಿಯಾ ಹೌಸ್ | ಚನ್ನಪಟ್ಟಣ/ರಾಮನಗರ |
ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಅಬ್ಬರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಅವರು, ಯಾವುದೇ ಕಾರಣಕ್ಕೂ ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.
ಚನ್ನಪಟ್ಟಣದಲ್ಲಿ ಇಂದು ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟನೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.


ಚನ್ನಪಟ್ಟಣ ಕ್ಷೇತ್ರದಲ್ಲಿ ಕೊಳಕು ಮಾಡಿ ಹಾಳು ಮಾಡಿದ್ದು ಅವರು. ಅದನ್ನೆಲ್ಲ ನಾನು ಈಗ ನಾನು ಕ್ಲೀನ್ ಮಾಡುತ್ತಿದ್ದೇನೆ. ಸಿ.ಪಿ.ಯೋಗೇಶ್ವರ್ ಅಂಬೇಡ್ಕರ್ ಭವನ ಕಟ್ಟುವುದಕ್ಕೆ ಕೂಡ ಬಿಡುತ್ತಿಲ್ಲ. ವಿನಾಕಾರಣ ಚನ್ನಪಟ್ಟಣ ಜನರಿಗೆ ತೊಂದರೆ ಕೊಡ್ತಾ ಇದ್ದಾರೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅಂತಹ 100 ಜನರನ್ನ ಕರೆದುಕೊಂಡು ಬನ್ನಿ, ನಾನು ಯಾವುದಕ್ಕೂ ತಲೆ ಕೆಡೆಸಿಕೊಳ್ಳೋದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೇರವಾಗಿ ಚಾಟಿ ಬೀಸಿದರು.
ಗುದ್ದಲಿ ಪೂಜೆ ಮಾಡಬೇಕಾದರೆ ನಿಯಮ ಏನಿದೆ ಎನ್ನುವುದು ಇವರಿಗೆ ಗೊತ್ತಿಲ್ಲವೆ? ಈ ಸರಕಾರಕ್ಕೆ ಶಿಷ್ಟಾಚಾರ ಏನೆಂಬುದು ಗೊತ್ತಿಲ್ಲವೇ? ಸ್ವಲ್ಪವಾದರೂ ವಿವೇಚನೆ ಬೇಡವೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ನಾನು ಯಾರಿಗೋ ಹೆದರಿ ರಾಮನಗರ ಬಿಟ್ಟು ಹೋಗುವ ಮಗ ಅಲ್ಲ. ನಾನು ದೇವೇಗೌಡರ ಕುಟುಂಬದಲ್ಲಿ ಹುಟ್ಟಿರೋದು. ಎಲ್ಲದಕ್ಕೂ ಹೋರಾಟ ಮಾಡುವ ಶಕ್ತಿ ನಮ್ಮ ಅಪ್ಪ ನನಗೆ ಕೊಟ್ಟಿದ್ದಾರೆ. ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು. ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು
ರಾಜಕೀಯ ವಿರೋಧಿಗಳಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಸೈಯ್ಯದ್ ಫಾಜಿಲ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು










Discussion about this post