ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ರಾಸಾಯನಿಕ ವಿಪತ್ತು ಘಟನೆಗಳು ಆಕಸ್ಮಿಕವಾಗಿ ಜರುಗಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶುಕ್ರವಾರ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಬಳಿ ಇರುವ ಯು.ಎಸ್.ಕೆ, ಎಲ್.ಪಿ.ಜಿ ಪ್ರೈ ಲಿಮಿಟೆಡ್ ಆವರಣದಲ್ಲಿ ಅಣಕು ಪ್ರದರ್ಶನದ ಮೂಲಕ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.
ಈ ವೇಳೆ ಶಿಡ್ಲಘಟ್ಟ ತಾಲ್ಲೂಕಿನ ತಹಸೀಲ್ದಾರ್ ರಾಜೀವ್ ಅವರು ಮಾತನಾಡುತ್ತಾ, ಕಾರ್ಖಾನೆಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ರಾಸಾಯನಿಕ ದುರಂತಗಳನ್ನು ತಡೆಗಟ್ಟಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಕಸ್ಮಿಕ ದುರಂತದಿಂದ ಸಂಭವಿಸುವ ಸಾವು ನೋವುಗಳು ಮತ್ತು ನಷ್ಟಗಳನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಹಾಗೂ ಪರಿಣಾಮಕಾರಿಯಾಗಿ ತುರ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸುವುದು. ವಿಪತ್ತುಗಳನ್ನು ನಿಯಂತ್ರಿಸುವಲ್ಲಿ ಆಡಳಿತ ವರ್ಗದವರಿಗೆ, ಕೆಲಸಗಾರರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಣಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಾರ್ವಜನಿಕರು ಯಾವುದೇ ರೀತಿಯ ಭಯಭೀತರಾಗದೇ ರಾಸಾಯನಿಕ ಸೋರಿಕೆ ಸಂದರ್ಭದಲ್ಲಿ ಧೃತಿಗೆಡದೇ ಆ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಮುನ್ನೇಚ್ಚರಿಕೆಗಳ ಬಗ್ಗೆ ಗಮನ ಹರಿಸಿ ತಮ್ಮ ತಮ್ಮ ಪಾತ್ರಗಳನ್ನು ನಿಭಾಯಿಸಬೇಕು ಎಂದು ಹೇಳಿದರು.
Also read: ಕ್ರೀಡಾಸ್ಫೂರ್ತಿ ಯಶಸ್ಸಿಗೆ ಸಹಕಾರಿ: ಪ್ರೊ. ವೀರಭದ್ರಪ್ಪ
ಪ್ಯಾಕ್ಟ್ರೀಸ್ ಅಂಡ್ ಬಾಯ್ಲರ್ಸ್ ನ ಉಪನಿರ್ದೇಶಕರಾದ ಸೋಮಶೇಖರ್ ಅವರು ಮಾತನಾಡಿ ಇದು ಒಂದು ಅಣಕು ಪ್ರದರ್ಶನವಾಗಿದ್ದು, ಯಾವುದೇ ವಿಪತ್ತು ಆಕಸ್ಮಿಕವಾಗಿ ಸಂಭವಿಸಿದಾಗ ಅಂತಹ ಸಂದರ್ಭದಲ್ಲಿ ಸುರಕ್ಷಿತವಾಗಿ ಪಾರಾಗುವುದು ಹೇಗೆ ಎಂಬ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇದನ್ನು ಏರ್ಪಡಿಸಲಾಗಿದೆ ಎಂದರು.
ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 3 ಆಂಬುಲೆನ್ಸ್, ಪೋಲಿಸ್ ಅಧಿಕಾರಿಗಳ ಹಾಗೂ 25 ಸಿಬ್ಬಂದಿ ಮಂದಿ, ಜಿಲ್ಲಾ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ 200 ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಅಣಕು ಪ್ರದರ್ಶನ ಫಲಕಾರಿಯಾಯಿತು.
ಅಣಕು ಪ್ರದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಶ್ರೀನಾಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಕಾಧಿಕಾರಿ ಮುನಿರಾಜು, ಪೊಲೀಸ್ ಅಧಿಕಾರಿ ಧರ್ಮೇಗೌಡ, ಅಗ್ನಿಶಾಮಕ ಅಧಿಕಾರಿ ಬಸವರಾಜು, ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ ರವರು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post