ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಚಿಕ್ಕಬಳ್ಳಾಪುರ ತಾಲ್ಲೂಕು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಎನ್.ಎಮ್. ನಾಗರಾಜ್ ಅವರು ಮಂಗಳವಾರ ಭೇಟಿ ನೀಡಿ ತಾಲ್ಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿ ಕಚೇರಿಯ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆದೇಶದನ್ವಯ ಪ್ರತಿ ಮಂಗಳವಾರ ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿ ಹಾಗೂ ವ್ಯವಸ್ಥೆಯನ್ನು ಪರಿಶೀಲಿಸಿ ಅದರ ಸುಧಾರಣೆಗೆ ಸಲಹೆ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಹೃದಯಭಾಗವಾದ ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

ಕಚೇರಿಯಲ್ಲಿ ದಾಖಲೆ ಕೊಠಡಿಗಳನ್ನು ಮತ್ತಷ್ಟು ಸುಧಾರಿಸಲು ಹಲವು ವರದಿಗಳನ್ನು ಸಿದ್ದಪಡಿಸಲಾಗುತ್ತಿದ್ದು, ಅದರ ಆಧಾರದ ಮೇಲೆ ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಲಾಗುವುದು. ಕಚೇರಿಯ ಭೂಮಿಶಾಖೆ, ಸಿಬ್ಬಂದಿ ಕೊಠಡಿ, ಅಭಿಲೇಖಾಲಯ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ, ಚುನಾವಣೆ ಶಾಖೆ, ನ್ಯಾಯಾಲಯ ಸಭಾಂಗಣ, ತಹಸೀಲ್ದಾರ್ ಗ್ರೇಡ್ 2 ಚೇಂಬರ್, ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ಗಮನಹರಿಸಲಾಗಿದೆ. ಎಲ್ಲಾ ಶಾಖೆಗಳು ಉತ್ತಮ ರೀತಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಜು.30ರಂದು ಗ್ರಾಮ ವಾಸ್ತವ್ಯ :
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜುಲೈ 30 ರಂದು ಗೌರಿಬಿದನೂರು ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮಪಂಚಾಯಿತಿಯ ಹನುಮಂತಪುರ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ನಾಗರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿವಿಧ ಯೋಜನೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ವೇದಿಕೆ ಕಾರ್ಯಕ್ರಮದಲ್ಲಿ ಹಕ್ಕಪತ್ರ ಹಾಗೂ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರುವ ಹಲವು ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
Also read: ಚಳ್ಳಕೆರೆ: ರೈತರ ಜಮೀನಿಗೆ ತಹಶೀಲ್ದಾರ್ ಎನ್. ರಘುಮೂರ್ತಿ ಭೇಟಿ – ಪರಿಶೀಲನೆ
ಜುಲೈ 31 ರಂದು ಜರಬಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಕೇಂದ್ರದಲ್ಲಿ ರೈತರೊಂದಿಗೆ ಸಂವಾದ ನಡೆಸುತ್ತಾರೆ. ನಂತರ ಸರ್ಕಾರದಿಂದ ಪೌತಿಖಾತೆ ಆಂದೋಲನದ ರೂಪಿಸಲಾಗಿದ್ದ ಅರ್ಹ ಫಲಾನುಭವಿಗಳಿಗೆ ದಾಖಲೆಗಳನ್ನು ವಿತರಿಸಲಾಗುತ್ತದೆ. ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದ್ದು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್, ತಹಸೀಲ್ದಾರ್ ಗಣಪತಿಶಾಸ್ತ್ರಿ ಸೇರಿದಂತೆ ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.










Discussion about this post