ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಬಳ್ಳಾಪುರ: ಜನರ ನೋವು, ಆಚಾರ, ವಿಚಾರ ರಾಜ್ಯಕ್ಕೆ ತಿಳಿಸಲು ನಾವಿಂದು ಇಲ್ಲಿ ಸೇರಿದ್ದೇವೆ. ನೀವು ಇಂದು ನಮಗೆ ಮಾತ್ರ ಶಕ್ತಿ ಕೊಟ್ಟಿಲ್ಲ, ಇಡೀ ರಾಜ್ಯಕ್ಕೆ ಶಕ್ತಿ ತುಂಬಿದ್ದೀರಿ. ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಏರ್ಪಡಿಸಲಾಗಿದ್ದ ಜನಧ್ವನಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿ ಅವರು, ಬಿಜೆಪಿಯವರು ಏನು ಮಾಡಿಲ್ಲ ಅಂತಾ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಆದರೆ ಅವರು ಮಾಡಿದ್ದಾರೆ. ಅವರು ಕೊಟ್ಟಿರೋದು ಎರಡು ಸೀರೆ, 1 ಸೈಕಲ್ ಮಾತ್ರ. ಕೆರೆಗೆ ನೀರು ತುಂಬಿಸಿದರಾ? ಸಾಲ ಮನ್ನಾ ಮಾಡಿದರಾ? ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರು.
ತಾನು ಇಂಧನ ಸಚಿವ ಆಗಿದ್ದಾಗ 9 ಸಾವಿರ ವ್ಯಾಟ್ ವಿದ್ಯುತ್ ಉತ್ಪಾದನೆ ಹೆಚ್ಚಿಸಿರುವುದರಿಂದ ಲೋಡ್ ಶೆಡ್ಡಿಂಗ್ ಸಮಸ್ಯೆ ಇಲ್ಲವಾಗಿದೆ. ಪಾವಗಡದಲ್ಲಿ ಒಂದೇ ಕಡೆ 2 ಸಾವಿರ ಮೆಗಾವ್ಯಾಟ್ ಉತ್ಪಾದಿಸಲು ಯೋಜನೆ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇಲ್ಲ, ವೃದ್ಧರು-ವಿಧವೆಯರಿಗೆ ಪಿಂಚಣಿ ಸಿಗುತ್ತಿಲ್ಲ. ಈ ಸರ್ಕಾರದಲ್ಲಿ ಲಂಚ, ಕಿರುಕುಳ ಹೆಚ್ಚಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಆರೋಪಿಸಿದರು.
ನಾನು ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಅನಾವಶ್ಯಕ ಕಿರುಕುಳ ನೀಡಿದರೆ, ನಾನು ಮತ್ತು ಸಿದ್ದರಾಮಯ್ಯ ಅವರೇ ಬಂದು ಧರಣಿ ಕೂರುತ್ತೇವೆ ಎಂದು ಹೇಳಿದರು.
ಯಾವುದು ಶಾಶ್ವತ ಅಲ್ಲ. ನಿನ್ನೆ ಇದ್ದ ಮಂತ್ರಿ ಇಂದು ಇರುವುದಿಲ್ಲ. ಸರ್ಕಾರಗಳೇ ಬಿದ್ದು ಹೋಗುತ್ತದೆ. ಹುಟ್ಟಿದ ಸೂರ್ಯ ಮುಳುಗುತ್ತಾನೆ. ಬುದ್ಧ-ಬಸವ ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆ ಏರಿದ ಗಳಿಗೆಯಲ್ಲಿ, ಭೀಮಾ ಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಗಾಂಧೀಜಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಸೋನಿಯಾ ಗಾಂಧಿ ಅವರು ದೇಶದ ಆರ್ಥಿಕತೆಗಾಗಿ ಪ್ರಧಾನ ಮಂತ್ರಿ ಸ್ಥಾನ ತ್ಯಾಗ ಮಾಡಿದ ಗಳಿಗೆಯಲ್ಲಿ ನಾವೆಲ್ಲ ಸೇರಿ ಈ ಜನಧ್ವನಿ ಜಾಥಾ ಆರಂಭಿಸಿದ್ದೇವೆ ಎಂದರು.
ಇದು ನಿಮ್ಮ ಧ್ವನಿ. ನಿಮ್ಮ ಜತೆ ಇರಬೇಕು ಎಂದು ಕಾಲ್ನಡಿಗೆಯಲ್ಲಿ ಬಂದು ನಿಮಗೆ ಶಕ್ತಿ ನೀಡಲು ಸೇರಿದ್ದೇವೆ. ನಿಮ್ಮ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಬೇಕು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post