ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗ ಮಧ್ಯದಲ್ಲಿಯೇ ಬಸ್ಸಿನ ಮಹಿಳಾ ನಿರ್ವಾಹಕಿಯು ಮಹಿಳೆಗೆ ಹೆರಿಗೆ ಮಾಡಿಸಿದ್ದು, ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ಚಿಕ್ಕಮಗಳೂರು ಘಟಕದ ಸಾರಿಗೆ ಬಸ್ ಬೆಂಗಳೂರು- ಚಿಕ್ಕಮಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹತ್ತಿರ ಯಾವುದೇ ಆಸ್ಪತ್ರೆ ಇರುವುದಿಲ್ಲ ಹಾಗೂ ಅವರಿಗೆ ಸಹಾಯದ ಅಗತ್ಯವಿರುತ್ತದೆ ಎಂದು ಮನಗಂಡು ತಕ್ಷಣ ಬಸ್ಸಿನಲ್ಲಿದ್ದ ಮಹಿಳಾ ನಿರ್ವಾಹಕರು ವಾಹನವನ್ನು ನಿಲ್ಲಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರನ್ನು ಕೆಳಗೆ ಇಳಿಸಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ನಿರ್ವಾಹಕಿಯಾದ ಎಸ್ ವಸಂತಮ್ಮ, ಬಸ್ಸಿನಲ್ಲಿಯೇ ಹೆರಿಗೆಯನ್ನು ಮಾಡಿಸಿದ್ದಾರೆ. ಅಲ್ಲದೆ ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ನಿಗಮದ ಚಾಲನಾ ಸಿಬ್ಬಂದಿಗಳು ಮಹಿಳೆಯ ತುರ್ತು ಖರ್ಚಿಗಾಗಿ ಎಲ್ಲಾ ಪ್ರಯಾಣಿಕರಿಂದ ಒಟ್ಟು 1500ರೂ. ಗಳನ್ನು ಸಂಗ್ರಹಿಸಿ ಮಹಿಳೆಗೆ ನೀಡಿರುತ್ತಾರೆ. ನಂತರ ಮಹಿಳೆಯನ್ನು ಆಂಬುಲೆನ್ಸ್ ಮುಖೇನ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು.
ಸಕಾಲದಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿಯವರ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಭಾಆಸೇ ರವರು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















