ಚಿಕ್ಕಮಗಳೂರು: ಇಲ್ಲಿನ ಸಿರ್ಗಾಪುರದ ಪವಿತ್ರ ಶ್ರೀ ದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು.
ಕಾರ್ಯಕ್ರಮದ ನಿಮಿತ್ತ ಶ್ರೀದತ್ತಾತ್ರೇಯ ಹೋಮ ನಡೆಸಲಾಯಿತು. ಆಶ್ರಮದ ಶ್ರೀ ಅವಧೂತ ಅಶೋಕ ಶರ್ಮಾ ಗುರೂಜಿ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ದರ್ಬಾರ್ ನಡೆಯಿತು.
ಈ ವೇಳೆ ಭಕ್ತರನ್ನು ಉದ್ದೇಶಿಸಿ ದತ್ತಾತ್ರೇಯ ಹೋಮವನ್ನ ಏರ್ಪಡಿಸಿದ ಔಚಿತ್ಯ ಹಾಗೂ ಅದರ ಪರಿಣಾಮದ ಬಗ್ಗೆ ಮಾತಾಡಿದ ಶಿವಮೊಗ್ಗ ಕಲ್ಲ ಗಂಗೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಯಾನಂದ ಗುರೂಜಿ, ಅವರವರ ಭಾವಕ್ಕೆ ತಕ್ಕಂತೆ ಫಲನೀಡುವ ಮಹತ್ವ ಈ ಹೋಮದಲ್ಲಿ ಅಡಗಿದೆ. ಇಷ್ಟಾರ್ಥಗಳನ್ನ ಕೂಡ ಈ ತರಹ ಯಜ್ಙಗಳಿಂದ ನೆರವೇರಿಸಿಕೊಳ್ಳಬಹುದಾಗಿದೆ ಎಂದರು.
ನಿಸ್ವಾರ್ಥದಿಂದ ಲೋಕಕಲ್ಯಾಣಾರ್ಥವಾಗಿ ಮಾಡಿದರೆ ಬಹಳ ಒಳಿತಾಗುತ್ತದೆ. ಕ್ರಮಬದ್ಧ, ಉದ್ದೇಶ ಶುದ್ಧಿ ಇದ್ದರೆ ಯಜ್ಞಗಳಿಂದ ಫಲ ಪಡೆಯಬಹುದು. ಕಲಿಯುಗದಲ್ಲಿ ನರಯಜ್ಞ ಅಂದರೆ ಹಸಿದವರಿಗೆ ಹೊಟ್ಟೆ ತುಂಬ ಅನ್ನ ನೀಡುವುದು ಉತ್ತಮ ಯಜ್ಞವಿರುತ್ತದೆ ಎಂದು ಯಜ್ಞಗಳ ಮಹತ್ವ ತಿಳಿಸಿದರು.
ಶಿವಮೊಗ್ಗ ಶ್ರೀಪಾದವಲ್ಲಭ ಆಶ್ರಮದ ಶ್ರೀ ಬ್ರಹ್ಮಾನಂದ ಸರಸ್ವತಿ ಅವರು ಆರ್ಶೀವಚನ ನೀಡಿ, ಮನುಷ್ಯ ಕೊಟ್ಟು ಪಡೆಯಬೇಕು. ಒಂದು ಹಿಡಿ ಬೀಜ ಬಿತ್ತಿದರೆ ಖಂಡುಗ ವಾಪಸ್ಸು ಪಡೆ ಎಂದು ಶ್ರೀವೆಂಕಟಾಚಲ ಗುರುಗಳು ತಿಳಿಸಿದ್ದಾರೆ. ಅಂತಹವರು ಈ ಪರಿಸರದಲ್ಲಿ ಜನಿಸಿದ್ದಾರೆ ಎಂದರು.
ಗುರುವಿನ ಕೆಲಸವೆಂದರೆ ಮೋಕ್ಷ ಪಡೆಯುವಲ್ಲಿ ಜನರಿಗೆ ದಾರಿನ ತೋರುವುದು. ಲೌಕಿಕ ಆನಂದಗಳು ನೀರು ಚಿಮುಕಿಸಿದಂತೆ. ಅಶಾಶ್ವತ. ಸದಾ ನೀರು ಸಿಗುವ ಸಮುದ್ರದ ಹಾಗೆ ಸಮೃದ್ದ ಆನಂದ ಪಡೆಯಲು ಗುರು ಅಭಯ ನೀಡುತ್ತಾನೆ. ತಾಯಿಯ ಮಮತೆ ತೋರಿ ಸಲಹುತ್ತಾನೆ. ಆದ್ದರಿಂದ ಗುರುಸ್ಮರಣೆ ಮಾಡಬೇಕು ಎಂದರು.
ಗುರು ದಯಾಮಯ, ಅಂತಹ ಗುರುವಿಗೆ ಸಮರ್ಪಣೆ ಮಾಡಿಕೊಂಡರೆ ಅವನೇ ಎಲ್ಲವನ್ನೂ ಪ್ರತಿಯಾಗಿ ನೀಡುತ್ತಾನೆ. ಆತನೇ ದತ್ತಾತ್ರೇಯ ಗುರು ಎಂದು ಸೋದಾಹರಣವಾಗಿ ಮಾತನಾಡಿದರು.
ಭದ್ರಾವತಿ ಶ್ರೀಮತಿ ಹೇಮಮ್ಮ ನವರು ಭಕ್ತಿಯ ಮಹತ್ವ ತಿಳಿಸಿ ಭಗವತಿಯ ಧ್ಯಾನ ಮಾಡಿ ಅಮ್ಮನನ್ನ ಬಿಟ್ಟರೆ ಬೇರಿಲ್ಲ ಎಂದರು.
ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ಅವರು ಕೂಡ ಆಶ್ರಮದ ನಂಟಿನ ಬಗ್ಗೆ ಸ್ಮರಿಸಿಕೊಂಡರು. ಅಧ್ಯಾತ್ಮ ಶಾಂತಿ ನೀಡುತ್ತದೆ. ತಾನು ಹೆಚ್ಚು ಅರಿಯದವ ಎಂದು ಗುರುವಿಗೆ ಶರಣು ಎಂದರು.
ಯಕ್ಷಗಾನ ಹಿರಿಯ ಕಲಾವಿದ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ತಮ್ಮ ಸ್ವರ ಸುಧಾರಣೆ ಬಗ್ಗೆ ದತ್ತನನ್ನು ಮೊರೆಹೋದೆ. ಈಗ ಮುಂಚಿನಂತೆ ಸುಸ್ವರ ದತ್ತನ ದಯದಿಂದ ಬಂದಿದೆ ಎಂದು ಭಾಗವತಿಕೆ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಆಶ್ರಮದ ಪ್ರಧಾನ ರಾದ ಅಕ್ಷಯ್ ಶರ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಿಮಿತ್ತ ಇಂದು ಧನ್ವಂತರಿ ಹವನ, ರುದ್ರ ಹವನ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಧನ್ಯರಾದರು.
Discussion about this post