ಗಣೇಶನದ್ದು ಇಂದು ಬಂದು ನಾಳೆಯ ಹೋಗಿ ಬಿಡುವ ವ್ಯಕ್ತಿತ್ವವಲ್ಲ, ಒಂದಲ್ಲ ಒಂದು ರೂಪದಲ್ಲಿ ಮನದೊಳಗೆ ಗಟ್ಟಿಯಾಗಿ ಕೂತುಬಿಡುತ್ತಾನೆ. ಶಕ್ತಿ, ಯುಕ್ತಿ, ಭಕ್ತಿಗಳ ಸಂಗಮವಾದ ಈತ ಭಾರತೀಯರ ಅದ್ಭುತ ಕ್ರಿಯೇಟಿವಿಟಿಗೆ ಸಾಕ್ಷಿ. ಎಲ್ಲ ಕರೆಂಟ್ ಅಫೇರ್ ಗಳಿಗೆ ತಕ್ಕಂತೆ ರೂಪ ಬದಲಿಸಿಕೊಳ್ಳಲು ಈತ ಸೈ. ಶ್ರದ್ಧಾಳುಗಳಿಗೆ ಈತ ಭಗವಂತ, ವಿದ್ಯಾರ್ಥಿಗಳಿಗೆ ಈತ ವಿದ್ಯಾಧಿದೇವತೆ. ಕಲಾವಿದರಿಗೆ ನಿತ್ಯ ಹೊಸ ಹೊಳಹು, ಚಿಣ್ಣರಿಗೆ ಬೆರಗು, ನಾಸ್ತಿಕರಿಗೆ ಕೌತುಕದ ಸಂಗತಿ, ಸಂಶೋಧಕರಿಗೆ ಮೆಟೀರಿಯಲ್, ಕೃಷಿಕರಿಗೆ ಭೂದೇವ, ಲೇಖಕರಿಗೆ ಹಾಸ್ಯದ ಸ್ಫೂರ್ತಿ.. ಸದಾ ಮೌಸ್ ಮೇಲೆ ಸವಾರಿ ಮಾಡುವ ನಮ್ಮ ಇ ಜನರೇಷನ್ಗೂ ಈತ ಗಣಕಪತಿ!
ಪ್ರಕೃತಿಯ ಪ್ರತಿರೂಪ, ಕಲೆತು ಬೆರೆತು ಜೀವಿಸುವುದಕ್ಕೂ ಸಂಕೇತ, ವಿದ್ಯೆ ವಿಜ್ಞಾನವನ್ನು ತಂದುಕೊಡುವ ದೈವ ಸ್ವರೂಪ … ತಣ್ಣನೆಯ ನೋಟದಿಂದ ಮಂದಹಾಸದಿಂದ ಸೌಹಾರ್ದದ ಜೀವನವನ್ನು ನಮಗೆ ತಂದು ಕೊಡುವ ಏಕದಂತನ ಪೂಜೆಯಲ್ಲಿ ಎಷ್ಟೊಂದೋ ಅಂತರಾರ್ಥಗಳು ಇವೆ. ಅವುಗಳನ್ನು ತಿಳಿದುಕೊಂಡರೆ ಮಕ್ಕಳಿಗೆ ವಿವರಿಸಿದರೆ ಅವೇ ಮನೋವಿಕಾಸದ ಪಾಠಗಳು. ಇದೇ ಭಾವನೆಯನ್ನು ಆಧ್ಯಾತ್ಮಿಕ ಶಾಸ್ತ್ರವೇತ್ತರು ವ್ಯಕ್ತಪಡಿಸುತ್ತಾರೆ.
ಅಬಾಲವೃದ್ದರಾದಿಯಾಗಿ ಪ್ರತಿಯೊಬ್ಬರ ಪೂಜೆಗೂ ಸಂಪ್ರೀತನಾಗುವ ಗಣಪ ಸಕತ್ ಲಿಬರಲ್. ಸಮಕಾಲೀನ ವಿದ್ಯಮಾನಗಳಿಗೆ ಈತ ಹೊಂದಿಕೊಳ್ಳುವಷ್ಟು ಸುಲಭವಾಗಿ ಮತ್ಯಾರು ಹೊಂದು ಕೊಳ್ಳರಾರರು, ಒಟ್ಟಾರೆ ಈತ ಕಲ್ಪನಾತೀತ.
ಹೊಸ ವಾಹನ ಖರೀದಿ, ವ್ಯಾಪಾರ ಪ್ರಾರಂಭ, ಗೃಹ ಪ್ರವೇಶ, ಮದುವೆ, ಹೀಗೆ ಪ್ರತಿಯೊಂದು ಕಾರ್ಯವೂ ನಿರಾತಂಕವಾಗಿ ನೆರವೆರಲಿ ಎಂದು ಮೊರೆಯಿಡುವುದು ಗಣಪತಿಗೆ.
ಮಹಾಭಾರತದ ಲಿಪಿಕಾರ
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನತತ ್ವಕ್ವಚಿತ್ (ಇಲ್ಲಿ ಏನಿದೆಯೋ ಅದು ಎಲ್ಲ ಕಡೆ ಇದೆ, ಇಲ್ಲಿ ಏನಿಲ್ಲವೋ ಅದು ಬೇರೆಲ್ಲೂ ಇಲ್ಲ) ಎಂಬ ಖ್ಯಾತಿಯ ಮಹಾಭಾರತ ಕಾವ್ಯಕ್ಕೆ, ಅದರೊಳಗಿನ ಭಗವದ್ಗೀತೆಗೆ, ಅಕ್ಷರ ರೂಪ ಕೊಟ್ಟವನೇ ನಮ್ಮೆಲ್ಲರ ಗಣಪನಲ್ಲವೇ! ಅಕ್ಷರಗಳಿಗೂ ಗಣಪನಿಗೂ ಅವಿನಾಭಾವ ಸಂಬಂಧ.
ಗಣಪತಿಯನ್ನು ಖಂಡೋಪಾಸನೆ ಮತ್ತು ಅಖಂಡೋಪಾಸನೆಯೇ ಮೊದಲದ ರೀತಿಯಲ್ಲಿ ಆರಾಧಿಸಬಹುದೆಂದು ನಾರದರು ವೇದವ್ಯಾಸರಿಗೆ ಮಹಾಭಾರತ ಬರೆಯುವ ಸಂದರ್ಭದಲ್ಲಿ ಹೇಳಿದರಂತೆ; ವ್ಯಾಸರು ಬಹುಕಾಲ ನೆನೆನೆನೆದು ಹೊಸೆದ ಮಹಾಭಾರತ ಕಥೆಯನ್ನು ಕಾವ್ಯರೂಪಕ್ಕಿಳಿಸಲು ಶೀಘ್ರಲಿಪಿಕಾರನೊಬ್ಬನ ಅಗತ್ಯತೆ ತುಂಬಾ ಇತ್ತು, ಬರಹದ ರೂಪಕ್ಕೆ ಭಟ್ಟಿ ಇಳಿಸಲಾಗದೇ ತಳಮಳಿಸಿ ನಿಶ್ಚೇಷ್ಟರಾಗಿದ್ದ ವ್ಯಾಸರಿಗೆ, ನಾರದರು ಗಣೇಶನನ್ನು ಲಿಪಿಕಾರನನ್ನಾಗಿ ಸ್ವಾಗತಿಸುವ ಸಲಹೆಯನ್ನು ಕೊಡವುದರ ಜೊತೆಗೆ ಆತನ ಉಪಾಸನೆಗಳ ಕುರಿತೂ ತಿಳಿಸುತ್ತಾರೆ.
ವ್ಯಾಸರಿಗೆ ಗಣಪ ಲಿಪಿಕಾರನಾದನೋ ಅಥವಾ ಅದು ಕಟ್ಟುಕತೆಯೋ ಎಂಬುದು ಅತ್ತ ಇರಲಿ, ಆದರೆ ಎಂಥ ದೊಡ್ಡ ಗಣಪ, ಒಂದು ಪುಟ್ಟ ಕೆಲಸಕ್ಕೆ ! ಏನು ದೊಡ್ಡಸ್ತಿಕೆ ಅವನದ್ದು!
ಏನು ಪ್ರಾಮಾಣಿಕತೆ ಗಣಪನದ್ದು! ವ್ಯಾಸ ಹೇಳಿದ್ದು ಬಿಟ್ಟು ತನ್ನದು ಸೇರಿಸಲಿಲ್ಲ, ತಿದ್ದಲು ಇಲ್ಲ ಅವನ ಬುದ್ದಿಯೇ ತಾನಾಗಿಬಿಟ್ಟನಲ್ಲ…
ಕೈ ವಿರಮಿಸಲು ಅವಕಾಶ ನೀಡಬಾರದು ಎಂಬುದು ನಿಯಮ. ಒಮ್ಮೆ ನಿಲ್ಲಿಸಿದರೆ ಮತ್ತೆ ಬರೆಯುವುದಿಲ್ಲ ಎಂಬ ಬೆದರಿಕೆ, ಲಿಪಿಕಾರನಿಗೂ ಎಂಥ ಘನತೆ !
ಕೋಪಗೊಂಡು ಗಣಪತಿ ಅಲ್ಲಲ್ಲಿ ತಿದ್ದು ಬರೆದಿದ್ದರೆ ಹೇಗಾಗುತ್ತಿತ್ತು ಹೊಸ ಕಾವ್ಯ? ಹಾಗಾಗದೆ ಹಸ್ತ , ಲೇಖನಿ, ಮಸಿ ಇವನದೆ, ಬರೆಹ ರೂಪವೂ ಆದರೆ ವಕ್ತಾರ “ಅವನು”
ಈಗ್ಗೆ ಸುಮಾರಾಗಿ ಒಂದೆರಡು ದಶಕಗಳ ಹಿಂದಿನವರೆಗೂ ಗಣಪತಿ ಹಬ್ಬವೆಂದರೆ ಅತ್ಯಂತ ವಿಶಿಷ್ಟವಾದ ಹಬ್ಬವೇ ಆಗಿತ್ತು, ಯಾವಾಗ ಟೀವಿ ಪ್ರಾಬಲ್ಯ ಹೆಚ್ಚಾಗ ತೊಡಗಿತೊ, ಆಗ ಎಲ್ಲ ಆಚರಣೆಗಳಿಗೂ ಬಿದ್ದ ನಿಯಂತ್ರಣವು ಈ ಹಬ್ಬಕ್ಕೂ ಬಿದ್ದಿತು, ಪೂಜಾ ವಿಧಾನ, ಸ್ಯಮಂತಕೋಪಾಖ್ಯಾನಗಳು ಟೀವಿಗಳಲ್ಲಿ ಬಂದು ಅದಕ್ಕಿದ್ದ ವೈಯುಕ್ತಿಕತೆ, ವೈಶಿಷ್ಟ್ಯಗಳು ಕಳೆದು ಹೋದವು, ಇಷ್ಟಾಗಿ ಈಗಲು ತನ್ನದೇ ಆದೊಂದು ಪ್ರತ್ಯೇಕತೆಯನ್ನು ಉಳಿಸಿಕೊಂಡಿರುವ ಗಣಪತಿಹಬ್ಬವು ಈ ಎಲ್ಲ ರೂಪಾಂತರಗಳಿಗೆ ಒಳಪಟ್ಟು ಸಹ ಗಟ್ಟಿಯಾಗಿ ಆಚರಣೆಗೊಳ್ಳುತ್ತದೆ ಎಂದೇ ಹೇಳಬೇಕು.
ಪ್ರೀತಿಸುವವರನ್ನು ಪ್ರೀತಿಸು, ದ್ವೇಷಿಸುವವರನ್ನು ದ್ವೇಷಿಸು ಎಂಬುದು ಒಂದು ಸಾಮಾನ್ಯ ತತ್ವ. ಪ್ರೀತಿಸುವವರನ್ನು ಪ್ರೀತಿಸು, ದ್ವೇಷಿಸುವವರನ್ನು ಪ್ರೀತಿಸು ಎಂಬುದು ದೇವತ್ವದ ಮಾತು. ಮಾನವಶ್ರೇಷ್ಟ ನುಡಿ, ಗಣೇಶನ ಕುರಿತ ಕತೆಗಳೆಲ್ಲ ಜೀವನ ಮೌಲ್ಯಗಳನ್ನು ನಮ್ಮ ಮುಂದಿಡುತ್ತದೆ, ಇವನ್ನು ಅರಿತು ಗಣೇಶ ಚೌತಿ ಆಚರಿಸಿದರೆ, ಆ ಮೌಲ್ಯಗಳನ್ನು ನಮ್ಮದಾಗಿಸಿಕೊಂಡರೆ ಈ ಆಚರಣೆಯು ಹೆಚ್ಚು ಅರ್ಥವಂತಿಕೆಯನ್ನು ಪಡೆಯುತ್ತದೆ.
ಗಣೇಶೋತ್ಸವ ಎಷ್ಟೋ ಮಂದಿಗೆ ಆರ್ಥಿಕ ಸಬಲತೆ ನೀಡಿದೆ. ಮೂರ್ತಿ ತಯಾರಕರು , ಬಣ್ಣ ಬಳಿಯುವರು , ಸಾಗಾಟಗಾರರು , ವಾಹನಗಳವರು, ಸಹಾಯಕರು, ಸಾಂಸ್ಕೃತಿಕ ಉತ್ಸವಗಲಿಗೆ ಜೀವ ತುಂಬುವ ಕಲಾವಿದರು , ಪುರೋಹಿತರು. … ಹೀಗೆ ಒಟ್ಟಿನಲ್ಲಿ ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಉದಾರ ನೀತಿ ಗಣೇಶನದ್ದು.
ಕಬ್ಬಿನ ಜಲ್ಲೆಯಲ್ಲಿ ಸಿಹಿಯಿರುವಂತೆ ಗಣೇಶನ ಭಾವದಲ್ಲಿ ಆಧ್ಯಾತ್ಮ ತತ್ವವೆಂಬ ಅಮೃತವಿದೆ. ಗಣಪತಿಯನ್ನು ಅನುಸಂಧಾನ ಮಾಡಿಲಾಗದಷ್ಟೇ ಅದರಲ್ಲಿನ ಮಧುರತೆ ಅರಿವಾಗುತ್ತದೆ.
ವಿಘ್ನ ನಿವಾರಣೆ,ಶುಭಾರಂಭಗಳಿಗಾಗಿ- ಆರಂಭವಾದ ಈ ಗಣನಾಯಕನ ಪೂಜೆಯಲ್ಲಿ ಬಹಳ ಹಿಂದೆ ಬಹುಶಃ ಮೂರ್ತಿ ಕಲ್ಪನೆ ಇದ್ದಿರಲಾರದು. ಬಿಂದು, ತ್ರಿಕೋಣ, ಷಟ್ಕೋಣ, ಅಷ್ಟಕೋನ ಮಂಡಲವಾಗಿ, ಸ್ವಸ್ತಿಕದ ಕೇಂದ್ರವಾಗಿ, ಧಾನ್ಯ – ತೆಂಗಿನ ಕಾಯಿಗಳ ಮಂಡನವಾಗಿ ಆರಂಭವಾದದ್ದು ಗಣೇಶಕಲ್ಪ. ಮೂಲತಃ ಸಾಕಾರ -ನಿರಾಕಾರ ದೈವಕಲ್ಪನೆಯ ಸಮನ್ವಯದಿಂದ ಬಂದ ರೂಪ ಆತನದು.
ಕಬ್ಬಿನ ತೋರಣಗಳನ್ನು ಹಾಳೆಸಗುವ ಆನೆಗಳ ಹಾವಳಿ ತಡೆಯಲು ಆನೆಮೊಗದ, ಕಬ್ಬು ತಿನ್ನುವ ದೇವರ ಪೂಜೆ ಆರಂಭವಾಯಿತು.ಜತೆಗೆ ಧಾನ್ಯ ತಿನ್ನುವ ಇಲಿಯನ್ನು ಶಮನಗೊಳಿಸಲು ಇಲಿಯ ವಾಹನ ಎಂಬ ವಾದ ಚೆನ್ನಾಗಿವೆಯಾದರೂ ಆ ಕಲ್ಪನೆಗಳಿಗೆ ಇತಿಹಾಸದಲ್ಲಾಗಲಿ, ಧಾರ್ಮಿಕ ಪರಂಪರೆಗಳಲ್ಲಾಗಲಿ ಆಧಾರಗಳು ಸಾಲವು.
ಬಹುತ್ವಕ್ಕೆ, ಜನಪರತೆಗೆ, ಸಾಂಸ್ಕೃತಿಕ ಔದಾರ್ಯಕ್ಕೆ ಗಣಪತಿ ಕೇತನ. ದೇವಾಲಯದಿಂದ ತೊಡಗಿ ಬಯಲಿನವರೆಗೆ ಆತನ ವಾಸ. ವಿನಾಯಕ ವಿದ್ಯೆಗೆ ಅಧಿದೇವತೆ. ಪ್ರತಿಭೆಗೆ ಮೂಲ ಸೆಲೆ. ‘ಬೆನಕ ಬೆನಕ ಏಕದಂತ… ‘ ಎಂತಲೆ ನಮ್ಮ ಮಕ್ಕಳಿಂದ ದೇವತಾರಾಧನೆ ಅರಂಭಿಸುವುದು ಆಸ್ತಿಕರ ಮನೆಯಲ್ಲಿ ರೂಢಿ. ಗಣಪತಿಯನ್ನೇ ಆರಾಧನೆಯ ಮೊದಲ ದೇವತೆಯಾಗಿ ಸ್ವೀಕರಿಸಿ ದೊಡ್ಡವರು ಸ್ತುತಿಸುವುದು ನಿರ್ವಿಘ್ನತೆಗಾಗಿ ಅನ್ನುವುದು ಒಂದು ಕಾರಣ, ಇನ್ನೂ ಒಂದು ಮುಖ್ಯ ಕಾರಣ ಅಂದರೆ ನಮ್ಮ ಮಕ್ಕಳು ಗಣಪನ ಹಾಗೆ ಮಹಾನ್ ಪ್ರತಿಭಾವಂತರಾಗಬೇಕು. ಅವನ ಹಾಗೆ ಅನನ್ಯತೆಯನ್ನು ಮೈಗೂಡಿಸಿಕೊಂಡು, ಅವನ ಚತುರತೆಯನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂಬ ಆಶಯದಿಂದಲೇ.
ಬದುಕು ಎಂದರೆ ಕ್ರಿಯಾಶೀಲತೆ, ಮನುಷ್ಯ ಒಂದು ಕ್ಷಣವೂ ಸುಮ್ಮನಿರಲಾರ; ಯಾವುದಾದರೊಂದು ಚಟುವಟಿಕೆಯಲ್ಲಿ, ಕೆಲಸದಲ್ಲಿ ಸದಾ ಅವನು ಮಗ್ನನಾಗಿರುತ್ತಾನೆ. ಹೀಗೆ ಅವನು ಕೈಹಿಡಿಯುವ ಕೆಲಸಗಳಲ್ಲಿ ಎದುರಾಗುವ ವಿಘ್ನಗಳಿಂದ ಪಾರು ಮಾಡಿಸುವ ಶಕ್ತಿಯೊಂದರ ಹಂಬಲ ಒದಗಿದ್ದು ಅವನಿಗೆ ಸಹಜವೇ ಇಂಥ ವಿಘ್ನಗಳನ್ನು ನಾಶ ಮಾಡಿ ನಂಬಿದವರ ಹಿಡಿಯುವ ತತ್ವವೇ ಗಣೇಶನ ಪ್ರಧಾನ ಆಂಶ. ನಮ್ಮ ಜೀವನದುದ್ದಕ್ಕೂ ನಮ್ಮ ಜೊತೆಯ್ಲಿರುವ ದೈವ ಅವನು ಅವನು ಸರ್ವವ್ಯಾಪಿ ಅಷ್ಟೇ ಅಲ್ಲ; ಅನಂತರೂಪಿಯೂ ಹೌದು. ನಾವು ಯಾವ ರೂಪದಲ್ಲಿ ಧ್ಯಾನಿಸಿದರು ಅವನ ಸಾಕ್ಷತ್ಕಾರವಾಗುತ್ತದೆ. ಹೀಗಾಗಿಯೇ ವಿಶ್ವರೂಪಿಯಾಗಿ ನಮ್ಮನ್ನು ಉದ್ಧರಿಸಬಲ್ಲ.
ಅವಿರತವಾಗಿ ವಿಘ್ನಕಾರಿ ಶಕ್ತಿಗಳ ಆಕ್ರಮಣವನ್ನು ನಿಗ್ರಹಿಸಲು ಶಕ್ತಿ ಸಾಮಥ್ರ್ಯವನ್ನು ಹೊಂದಿರುವ ಮಹಾಗಣಪತಿಯನ್ನು ವಿಶ್ವ ಜನತೆಯ ಶ್ರೇಯೋಭಿವೃದ್ದಿಯನ್ನು ಸಂಕಲ್ಪಿಸಿ, ಗಣಪತಿಯನ್ನು ಸುಪ್ರೀತಗೊಳಿಸುವ ಭಾಗವೇ ಮಹಾಗಣಪತಿ ಅಥರ್ವಶೀರ್ಷ ವೇದ ಸಾಹಿತ್ಯ. ಇದು ಜ್ಞಾನ ಸಂಬಂಧಿ ಮಂತ್ರವಾದರೂ, ಕರ್ಮಕಾಂಡದಲ್ಲಿ ಬಳಕೆಯಾಗುತ್ತಿರುವ ಅಪೂರ್ವವಾದ ವೇದಾಂತ, ಗಣಪತಿಯನ್ನು ವಿಶ್ವಕರ್ತನನ್ನಾಗಿ ಸ್ತುತಿಸಿದ ಶಬ್ಧಗಳ ಗುಚ್ಛ, ನಿರಾಕಾರದಲ್ಲೂ ಸಾಕಾರವನ್ನು ವರ್ಣಿಸಿದ ಕಾವ್ಯದ ಜಡಿ, ಬದುಕಿನ ಸತ್ಯಗಳನ್ನು ಸೂಕ್ಷ್ಮ ವಾಗಿ ಸೆರೆಬಿಟ್ಟು, ನಂಬಿದವರಿಗೆ ಇಂಬನ್ನೀಯುವ ಭರವಸೆಯ ನುಡಿ ತರಂಗ, ಭಾರತೀಯ, ಪಾಶ್ಚತ್ಯ ವಿದ್ವಾಂಸರನ್ನು ಬೆರಗುಗೊಳಿಸಿದ ಸಂಸ್ಕøತ ಸಾರಸ್ವತಲೋಕದ ಉಪಮಾತೀತ ಚಿಂತನೆ.
ಗುರುವಾಜ್ಞೆ, ದೈವಾಜ್ಞೆ, ರಾಜಾಜ್ಞೆಗಳೆಂಬ ಆಜ್ಞಾತ್ರಯಗಳು .ಇದರಲ್ಲಿ ಗುರುವಾಜ್ಞೆ, ಹೊರತಾಗಿ ಉಳಿದ ಎರಡು ಆಜ್ಞೆ ಪಡೆದರೆ ಪರಿಪೂರ್ಣತೆ ಸಿಗದು, ಆದರೆ ಉಳಿದ ಎರಡು ಆಜ್ಞೆಗಳ ಹೊರತಾಗಿ ಗುರುವಾಜ್ಞೆಯೊಂದೆ ಇದ್ದರೂ ಬಾಕಿ ಎರಡು ಆಜ್ಞೆಗಳು ಲಭಿಸುತ್ತದೆ. ಅದುವೇ ಜ್ಞಾನಸಂಪನ್ನನಾದ ಗುರುಗಣಪತಿ.
ಸ್ವಂತ ಅಸ್ತಿತ್ವ ಇಲ್ಲದೇ ಸೂರ್ಯನಿಂದಾಗಿ ಬೆಳಕು ನೀಡುವ ಚಂದ್ರನಂತಹ ಬುದ್ದಿಜೀವಿ ಗಳೆಂದು ತಮ್ಮನ್ನು ತಾವು ಕರೆದು ಕೊಳ್ಳುವ ಜನರಿಗೊಂದು ಎಚ್ಚರಿಕೆಯ ಮಾತು ಈ ಚಂದ್ರನಿಗೆ ಶಾಪ ನೀಡಿದ ಪ್ರಕರಣದಲ್ಲಿದೆ.
ಸಗಣಿಯೊಡನೆ ಜಗಳವಾಡುವುದಕ್ಕಿಂತ ಗಂಧದೊಡನೆ ವಿರಸ ಲೇಸು ಎಂದು ಅಲ್ಪರೊಡನೆ ಮೂರ್ಖರೊಡನೆ ವ್ಯವಹರಿಸಿದ ತೃಪ್ತಿಗೆ ಆಂತರ್ಯದ ವೀರತ್ವ ಮತ್ತೆ ಮರುಕಳಿಸಲು ಘನಕಾರ್ಯವೊಂದನ್ನು ಮಾಡು ಎಂಬುದೇ ಕೃಷ್ಣ ತಂದ ಶಮಂತಕ ಮಣಿ ಹೇಳುತ್ತದೆ.
ಗಣೇಶ ಒಬ್ಬ ವಿಸ್ಮಯಕರ ದೇವತೆ, ಈತ ಇತರ ದೇವತೆಗಳಂತೆ ಗಂಡು ಹೆಣ್ಣುಗಳ ಮಿಲನದಿಂದ ಜನ್ಮತಾಳಿದವನಲ್ಲ. ಪಾರ್ವತಿಯ ಅಪೇಕ್ಷೆಯಂತೆ ಮಣ್ಣಿನಿಂದ ಎದ್ದು ಬಂದವನು. ಪ್ರಾಣಿ ಮನುಷ್ಯ ಈ ಇಬ್ಬರ ಅಂಗಗಳು ಕೂಡಿ ಆದವನು. ಸರ್ಪ-ಇಲಿಗಳಂತಹ ಶತೃ ಜೀವಿಗಳು ಇವನಲ್ಲಿ ಹೊಂದಿಕೊಂಡಿವೆ, ಆನೆ – ಮೂಷಿಕದಂತಹ ಹಿರಿ –ಕಿರಿ ಪ್ರಾಣಿಗಳ ಸಮಾಗಮವು ಇವನಲ್ಲಿವೆ. ‘ಜ್ಞಾನ’ ಸೂಚಕನಾದ ಶೇವವು ‘ಭೋಗ’ ಸೂಚಕವಾದ ಇವನ ಹೊಟ್ಟೆಯನ್ನು ಸುತ್ತುಕೊಂಡಿದೆ. ಸಿಹಿಯಾದ ಭಕ್ಷ್ಯವನ್ನು ಕೈಯಲ್ಲಿ ಹಿಡಿದು ನಿಂತ ಬಾಲಕನಿಗಿಂತ ಆನಂದಮಯ ಮೂರ್ತಿ ಯಾವುದು ? ನಮ್ಮ ಗಣೇಶ ಇಂಥವನು.
ಗಣೇಶ ರೂಪ ಅರ್ಥ ರೀತಿಗಳು ಅನಂತ. ದೊಡ್ಡ ಹೊಟ್ಟೆ ಭಕ್ತರ ಅಪರಾಧಗಳನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳುವುದಕ್ಕೂ, ಅಗಲ ಕಿವಿ ಪಾರ್ಥನೆ ಕೇಳುವುದಕ್ಕೂ, ಕೈಗಳಲ್ಲಿ ಪಾಶ, ಅಂಕುಶಗಳ ನಿಯಂತ್ರಣದ ಒಳಗೆ, ಮೋದಕದ ಪ್ರಾಪ್ತಿ ಭೋಗವು ಸ್ವನಿಯಂತ್ರಿತವಾಗಿರಬೇಕೆಂಬುದು ತಾತ್ಪರ್ಯ. ಸೊಂಡಿಲು ಬಾ ಎಂದು ಕರೆಯುವುದಕ್ಕೂ, ನಿವಾರಣೆಗೂ, ಸ್ವೀಕಾರಕ್ಕೂ ಹೌದು.
ಗಣಪತಿ ಮೂರ್ತಿ ಪರಿಕಲ್ಪನೆಯು ಮನುಷ್ಯ ಮತ್ತು ಪ್ರಾಣಿಗಳನ್ನು ಜೋಡಿಸುವ ಸಂಕೇತ ಒಂದುತನವಾದರೆ, ಬೊಜ್ಜು ಹೊಟ್ಟೆ ಧನಶ್ರೀಯ ದ್ಯೋತಕ.ದೊಡ್ಡ ತಲೆ ಜ್ಞಾನಭಂಡಾರದ ಪ್ರತೀಕ,ಉದ್ದನೆಯ ಮೂಗು ಚಿರಂಜೀವತ್ವ ಹಾಗೂ ಸೌಂದರ್ಯದ ಲಕ್ಷಣ ,ಚಿಕ್ಕ ಕಣ್ಣುಗಳು ಸೂಕ್ಷ್ಮಾತಿ ಸೂಕ್ಷ್ಮ ಗ್ರಾಹಿತ್ವ, ವಿಶಾಲ ಕಿವಿಗಳು ಸತ್ಯವನ್ನಾಲಿಸುವ ಸಾಧನ, ಆತನ ಸಿಂಧೂರ ವರ್ಣ ತತ್ವನಿಷ್ಠೆಯ ಸಂಕೇತ ಆತನ ವಾಹನ ಮೂಷಕ, ಚತುರತನ ಹಾಗೂ ಚುರುಕುತನದ ಲಕ್ಷಣ.
ಆನೆ- ವಿಶಾಲ ‘ಗಂಭೀರ’ ಗಜಚಲನ ಈ ರೀತಿ ಗಣಪತಿಯ ಮೂರ್ತಿಯು ಭಾರತೀಯ ಶಿಲ್ಪ ಶಾಸ್ತ್ರದಲ್ಲಿ ಬಹುವರ್ಥ ನೀಢುವ ಶಿಲ್ಪ- ಮಾನವನನ್ನು ಹಾಗೂ ಪ್ರಾಣಿಗಳನ್ನು ಜೋಡಿಸುವ ಪರಿಕಲ್ಪನೆ. ಶೋಕವಿನಾಶಕ ಎಂದು ಕರೆಸಿ ಕೊಳ್ಳುವ ಗಣಪ ಪುಟಾಣಿ ಇಲಿಯನ್ನು ವಾಹನವನ್ನಾಗಿ ಹೊಂದಿರುವ ಸೃಜನಶೀಲ ವಾಹನ ಚಾಲಕ . ‘ಇಲಿ’ಯನ್ನು ಸಾಮಾನ್ಯವಾಗಿ ‘ಹುಲಿ’ಗೆ ವಿರುದ್ದವಾಗಿ ಬಳಸಲ್ಪಡುವ ಭಯಭೀತ ಪ್ರಾಣಿ . ಆ ಹೆದರಿಕೆ ಯನ್ನು ಹೋಗಲಾಡಿಸುವಂತೆ ಈ ಪುಟ್ಟ ಪ್ರಾಣಿಗೂ ಘನತೆಯ ಎಲ್ಲಾ ಧೈರ್ಯದ ಸಮಾನತೆಯನ್ನು ತಂದುಕೊಡುವುದು ಗಣಪನ ವಿಶೇಷತೆ.
ಸಾಂಕೇತಿಕ ಏಕದಂತ
ಆದಿಪೂಜಿತನ ಶರೀರ ರಚನೆಯೇ ವಿಶೇಷ,ಆತನ ದೇಹದ ಪ್ರತಿ ಅಂಗವೂ ಒಂದೊಂದು ಮೌಲ್ಯದ ಸಂಕೇತ ಗಜಮುಖನ ಬೃಹತ್ ತಲೆ – ನಂಬಿಕೆ, ಬುದ್ದಿವಂತಿಕೆ ಮತ್ತು ವಿವೇಚನಾಶಕ್ತಿಗಳನ್ನು ಸೂಚಿಸುತ್ತದೆ.
ಏಕದಂತನ ಒಂದೇ ದಂತ ಎಲ್ಲ ದ್ವಂದ್ವಗಳನ್ನು ಮೀರಿ ನಿಲ್ಲುವ ಸಾಮಥ್ರ್ಯದ ಪ್ರತಿಬಿಂಬ, ವಕ್ರತುಂಡನ ಮುರಿದ ಹಲ್ಲು ಮಾನವನ ಅಹಂ ಹೋಗಲಾಡಿಸುವುದರ ದ್ಯೋತಕ.
ಶೂರ್ಪಕರ್ಣನ ಗಜಕರ್ಣಗಳು ವಿವೇಕ, ನೆರವು ಕೋರುವ ಜನರ ಮೊರೆ ಆಲಿಸುವ ಸಾಮಥ್ರ್ಯವನ್ನು ಸೂಚಿಸುತ್ತದೆ. ಆಧ್ಯಾತ್ಮಿಕ ಸತ್ಯಗಳ ಬಗ್ಗೆ ಚಿಂತನೆ ಮಾಡುವುದನ್ನು ಪ್ರಕಟಿಸುತ್ತದೆ. ಚಿಂತನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸರಿಯಾಗಿ ಕೇಳಿಸಿಕೊಳ್ಳಬೇಕು , ಜ್ಞಾನ ಸಂಪಾದನೆಗೆ ಕಿವಿಗಳೂ ಮುಖ್ಯ ಎಂಬುದನ್ನು ಪ್ರತಿಪಾದಿಸುತ್ತದೆ.
ವಿಶ್ವಮುಖನ ವಕ್ರ ಸೊಂಡಿಲು ಸತ್ಯ ಮತ್ತು ಮಿಥ್ಯೆಗಳ ನಡುವಣ ವ್ಯತ್ಯಾಸವನ್ನು ಗುರುತಿಸಲು ವಿವೇಚನಾಶಕ್ತಿ ಬೇಕೆಂಬುದನ್ನೂ; ಹಣೆಯ ಮೇಲೆ ಚಿತ್ರಿತ ವಾದ ತ್ರಿಶೂಲವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲವನ್ನು ಸಂಕೇತಿಸುತ್ತದೆ. ಕೃಷ್ಣಪಿಂಗಾಕ್ಷನ ಸಣ್ಣ ಕಣ್ಣುಗಳು ಅತಿ ಸೂಕ್ಷ್ಮ ಗ್ರಹಿಕೆಯ ದ್ಯೋತಕ.
ಗಣಪನ ಚತುರ್ಭುಜವೂ ಮಾನವರಿಗೆ ಸಂದೇಶವೇ.ಮೇಲಿನ ಎಡಗೈನಲ್ಲಿರುವ ಕೊಡಲಿ ಮತ್ತು ಬಲಗೈನಲ್ಲಿರುವ ಕಮಲವು ಉದ್ರೇಕ, ಮೋಹವನ್ನು ದಮನ ಮಾಡಿ ಜೀವನದಲ್ಲಿ ಆಧ್ಯಾತ್ಮಿಕ, ಮಾನಸಿಕ ,ಬೌದ್ಧಿಕತೆಯನ್ನು ತುಂಬುವ ಸಂಕೇತ. ಕೆಳಗಿನ ಎಡಕೈ ಯಲ್ಲಿ ಲಾಡು ತುಂಬಿದ ತಟ್ಟೆಯಿದ್ದು ಭಕ್ತರ ಅನಿಷ್ಟಗಳ ನಿವಾರಿಸಿ ಅಭಿವೃದ್ದಿಯ ಕಡೆ ಕೊಂಡೂಯ್ಯೂವ ಸೂಚಕ. ಬಲಗೈ ಆರ್ಶಿವದಿಸುವ ಭಂಗಿಯಲ್ಲಿದ್ದು ತನ್ನ ಭಕ್ತರನ್ನು ಸದಾ ಆಶಿರ್ವದಿಸುತ್ತ, ಹಾರೈಸುತ್ತ ಸಂಕಷ್ಟಹರನಾಗಿದ್ದಾನೆ.
ಲಂಬೋದರನ ದೊಡ್ಡ ಹೊಟ್ಟೆಯಲ್ಲಿ ಅಸಂಖ್ಯಾತ ಲೋಕಗಳು ಅಡಗಿದ್ದು, ಅದು ಪ್ರಪಂಚದ ದುಃಖ, ಕ್ಲೇಶಗಳನ್ನು ನುಂಗಿ ಜಗತ್ತನ್ನು ರಕ್ಷಿಸುವ ಚಿಂತಾಮಣಿ ಸಾಮಥ್ರ್ಯವನ್ನು ಸೂಚಿಸುತ್ತದೆ. ಗಣಪತಿಯು ಕುಳಿತಿರುವ ಭಂಗಿಯು ಇಹ ಪರ ಲೋಕಗಳಲ್ಲಿ ತನ್ನ ಬುದ್ದಿ ಶಕ್ತಿಯಿಂದ ಬಾಳುವುದರ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಗಣೇಶನ ಉಡುಗೆ ಹಳದಿ ಬಣ್ಣ ಪ್ರಾಮಾಣಿಕತೆ, ನೈಮಲ್ರ್ಯ, ಶಾಂತಿ; ಕೆಂಪು ಕ್ರಿಯಾಶೀಲತೆ ಹಾಗು ಹಸಿರು ಅಭಿವೃದ್ದಿಯನ್ನು ಪ್ರತಿಬಿಂಬಿಸುತ್ತದೆ. ವಿಘ್ನೇಶ್ವರನ ವಾಹನ ಇಲಿಯನ್ನು ಚುರುಕುತನದ ಪ್ರತೀಕವಾಗಿ ನೋಡಲಾಗುತ್ತದೆ.













Discussion about this post