ಕಲ್ಪ ಮೀಡಿಯಾ ಹೌಸ್ | ಭರಮಸಾಗರ |
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗುವ ಜೊತೆಯಲ್ಲಿ ಕೆರೆ ಏರಿ ಬಿರುಕು ಬಿಟ್ಟು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಕೆರೆ-ಕಟ್ಟೆಗಳು ಉಕ್ಕಿ ಹರಿಯುತ್ತಿದ್ದು, ಇದರಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಅಡಿಕೆ, ಜೋಳ, ರಾಗಿ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ, ಸಿರಿಗೆರೆ, ವಿಜಾಪುರ, ಬಿದರಕೆರೆ ಸುತ್ತಮುತ್ತಲಿನ ಕೆರೆಯು ತುಂಬಿ ಕೊಡಿ ಮೂಲಕ ನೀರು ಹೊರಹೋಗುತ್ತಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದೆ. ಇದರಿಂದ ಕೊಯ್ಲಿಗೆ ಬಂದ ಮೆಕ್ಕೆಜೋಳ ಬೆಳೆ ಜಲಾವೃತವಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇನ್ನು, ಭರಮಸಾಗರ ಗ್ರಾಮದಲ್ಲಿ ಏತ ನೀರಾವರಿ ಯೋಜನೆ ಮೂಲಕ ನಿರ್ಮಾಣವಾಗಿರುವ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಾಣ ಮಾಡಿರುವ ಸುಮಾರು 300 ವರ್ಷಕ್ಕಿಂತ ಹಿಂದಿನ ಹೆಸರಾಂತ 1000 ಎಕರೆ ವಿಸ್ತೀರ್ಣದ ದೊಡ್ಡ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಪರಿಣಾಮ ಕೆರೆಯ ಪ್ರಮುಖ ಏರಿ, ನೀರಿನ ಒತ್ತಡದಿಂದ ಬಿರುಕು ಬಿದ್ದ ಪರಿಣಾಮ ಸ್ಥಳೀಯ ಜನರ ಮತ್ತು ರೈತರ ಆತಂಕದ ಪರಿಣಾಮ ಭರಮಸಾಗರದ ಕೆರೆಯ ತಡೆಗೋಡೆಯನ್ನು (ಕೊಡಿಯನ್ನು) ಸಡಿಲಿಸಿ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ. ಕೆರೆ ಏರಿಯಲ್ಲಿ ಕಾಣಿಸಿರುವ ಬಿರುಕನ್ನು ಸರಿಪಡಿಸಲಾಗುತ್ತಿದೆ. ಬಿರುಕು ಬಿಟ್ಟಿರುವ ಏರಿಯ ಮೇಲೆ ವಾಹನ ಸಂಚಾರ ನಿಲ್ಲಿಸಲಾಗಿದೆ.
ಹಿಂದೆ ಕಳಪೆ ರಸ್ತೆ ಕಾಮಗಾರಿ ಮತ್ತು ಏತ ನೀರಾವರಿ ಯೋಜನೆಯಲ್ಲಿ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಕೆರೆಯನ್ನು ನವೀಕರಣ ಮಾಡಿದ ಸಂದರ್ಭದಲ್ಲಿ ಏರಿಯ ಭದ್ರತೆ, ಸುರಕ್ಷತೆಗೆ ಸರಿಯಾದ ಮುತುವರ್ಜಿ ತೆಗೆದುಕೊಂಡು ನೀರನ್ನು ಹರಿಸಬೇಕಾಗಿತ್ತು. ಆದರೆ ಆ ಕೆಲಸ ಮಾಡದೆ ನೀರು ಹರಿಸಿದ ಪರಿಣಾಮ ಇಂದು ಈ ಸಮಸ್ಯೆ ಎದುರಿಸಬೇಕಾಗಿದೆ. ಸಂತೋಷದ ವಿಚಾರ ಎಂದರೆ ಈಗ ಏರಿಯ ಭದ್ರತೆಗೆ ಗಮನ ಹರಿಸಿ ಕೆಲಸ ಮಾಡುತ್ತಿದ್ದಾರೆ. ನೋಡೋಣ ಇದು ಎಷ್ಟರ ಮಟ್ಟಿಗೆ ಸರಿಯಾಗುತ್ತದೆ, ಆ ಕೆಲಸಕ್ಕೆ ನಮ್ಮ ಭರಮಸಾಗರದ ಜನತೆ ರೈತರು ರಾಜಕೀಯ ಮುಖಂಡರು ಈ ಏರಿ ಭದ್ರತೆ ಕೆಲಸ ಮುಚ್ಚುತ್ತಾರೆ ಕಾದು ನೋಡಬೇಕಿದೆ.
ಹಳ್ಳಿ ಹಳ್ಳಿಗಳ ನೀರಿನ ಕಾಲುವೆಯಲ್ಲಿ ಹರಿವು ಹೆಚ್ಚಾದ ಪರಿಣಾಮ ಹಳ್ಳಗಳು ತುಂಬಿ ಹರಿಯುತ್ತಿದೆ. ಅಪಾರ ಪ್ರಮಾಣ ನೀರು ರೈತರ ಜಮೀನಿಗೆ ನುಗ್ಗುತ್ತಿದೆ. ಮಳೆ ನೀರಿನಿಂದ ಭರಮಸಾಗರ ಹೋಬಳಿಯ, ಹಳ್ಳ ಉಕ್ಕಿ ಹರಿಯುತ್ತಿರುವ ಕಾರಣ ದೊಡ್ಡ ಮತ್ತು ಸಣ್ಣ ಕೆರೆಗಳ ಸುತ್ತಮುತ್ತಲಿನ ಜಮೀನು ಪೂರ್ಣವಾಗಿ ನೀರಾಗಿದೆ.
ಈ ಹಿಂದೆ ರೈತರು, ಭರಮಸಾಗರ ಜನರು ಅನೇಕ ರೀತಿಯ ಒತ್ತಡದಿಂದ ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್’ಗಳು ಕೆರೆ ಭಾಗಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಮಾಡಿಸಿದ್ದಾರೆ. ಆದರೆ ಅದು ಸರಿಯಾಗಿ ಸಮರ್ಪಕವಾಗಿ ಮಾಡದೆ ಮತ್ತೆ ಹೆಚ್ಚಿನ ಬಿರುಕು ಕಾಣಿಸಿಕೊಂಡಿದೆ. ಮತ್ತೆ ಬಿರುಕಿಗೆ ಮಣ್ಣು ತುಂಬುವ ಕಾರ್ಯ ಪ್ರಾರಂಭವಾಗಿದೆ. ಎಷ್ಟರ ಮಟ್ಟಿಗೆ ಸರಿಯಾಗುತ್ತದೆ ಕಾದು ನೋಡೋಣ. ಅಡಿಕೆ, ತೆಂಗು ತೋಟ, ಕೊಯ್ಲಿಗೆ ಬಂದ ಮೆಕ್ಕೆಜೋಳ, ರಾಗಿ, ಜೋಳದ ಜಮೀನುಗಳು ಮುಳುಗಡೆಯಾಗಿವೆ, ಕೆರೆ ಕೋಡಿಗಳಿಂದ ನೀರು ಹರಿದು ತಗ್ಗು ಪ್ರದೇಶದಲ್ಲಿರುವ ಜಮೀನುಗಳು ಮುಳುಗಡೆಯಾಗಿದೆ. ಇನ್ನು ರೈತರಿಗೆ ಆದ ಹಾನಿಯನ್ನು ಸರ್ಕಾರ ಯಾವರೀತಿ ಅವರ ಸಮಸ್ಯೆ ಬಗೆ ಹರಿಸುತ್ತದೆಯೇ ನೋಡೋಣ.
(ವರದಿ: ಮುರುಳೀಧರ ನಾಡಿಗೇರ್)
Discussion about this post