ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ದೇಶ ಕಂಡ ಮಹಾವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದಲೇ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸನ್ನು ಕಂಡವರು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಗಂಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಳವಾಗಿ ನಡೆದ ಛತ್ರಪತಿ ಶಿವಾಜಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಭಾವ ಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಅವರು ಮಾತನಾಡಿದರು.
ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜ, ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ ಎಂದು ತಿಳಿಸಿದರು.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಸಾಲಿನಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು, ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ, ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ವಣದ ಕನಸು ಕಂಡವರು ಎಂದರು.
ತಹಶಿಲ್ದಾರ ಎಂ. ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರವು ಎಲ್ಲಾ ಮಹನೀಯರ ಜಯಂತಿಯ ಆಚರಿಸುವಂತೆ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿದೆ ಎಂದರು.
ಕರ್ನಾಟಕಕ್ಕೂ ಮರಾಠರಿಗೂ ರಾಜಕೀಯ ಒಡನಾಟ ಆರಂಭವಾಗಿದ್ದು 17ನೇ ಶತಮಾನದ ಮೊದಲರ್ಧದಲ್ಲಿ. ರಾಜ್ಯ ವಿಸ್ತರಣೆಯಲ್ಲಿ ಮೊಘಲರಿಗೂ ವಿಜಾಪುರದ ಆದಿಲ್ ಶಾಹಿಗಳಿಗೂ ಕರಾರು ಏರ್ಪಟ್ಟು(1636) ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನ ಕೆಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದ್ದರು. ಇದರಿಂದಾಗಿ ವಿಜಾಪುರದ ಸುಲ್ತಾನರು ಈ ಪ್ರದೇಶಗಳಲ್ಲಿ ಆಗಿಂದ್ದಾಗ್ಗೆ ದಂಡಯಾತ್ರೆಗಳನ್ನು ನಡೆಸುತ್ತಲೇ ಇದ್ದರು. ಇಂತಹ ದಂಡಯಾತ್ರೆಗಳಲ್ಲಿ ಮರಾಠಿ ಸರದಾರರು ಮುಂಚೂಣಿಯಲ್ಲಿದ್ದು ಬಹುತೇಕ ಗೆಲುವುಗಳಿಗೆ ಕಾರಣರಾಗಿದ್ದರು ಎಂದರು.
ಜಿಲ್ಲಾ ಪಂಚಾಯಿತ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ನಗರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಕೃಷ್ಣಮೂರ್ತಿ, ತಾಲ್ಲೂಕು ಕಚೇರಿ ಸಿಬ್ಬಂದಿಗಳಾದ ಚಂದ್ರಶೇಖರ್, ಶ್ರೀನಿವಾಸ್, ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಹಾಜರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post