ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಾಯಕನಹಟ್ಟಿ ಕಾಟ್ವನಹಳ್ಳಿ ಬಳಿ ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 6 ವರ್ಷದ ಮಗು ಸಾವನ್ನಪ್ಪಿದೆ.
ಇಂದು ಸಂಜೆ ಘಟನೆ ನಡೆದಿದ್ದು, ಮೃತ ಮಗುವನ್ನು ಶ್ರಾವಣಿ (6) ಎಂದು ಗುರುತಿಸಲಾಗಿದೆ. ಡಿ.ಎಸ್. ಪ್ರಭು, ಸುಮ ಹಾಗೂ ಪದ್ಮಾವತಿ ಎನ್ನುವವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆ ಹೇಗಾಯಿತು?
ಚಳ್ಳಕೆರೆ ಸಮೀಪದ ವೆಂಕಟೇಶ್ವರ ನಗರದಿಂದ ಬಂಗಾರಕ್ಕನಹಳ್ಳಿ ಗ್ರಾಮಕ್ಕೆ ತಿಪ್ಪೇಸ್ವಾಮಿ ಹಾಗೂ ಪದ್ಮಾವತಿ ತಮ್ಮ ಆರು ವರ್ಷದ ಪುತ್ರಿ ಶ್ರಾವಣಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ನಾಯಕನಹಟ್ಟಿ ಪಟ್ಟಣದ ಖಾಸಗಿ ಪ್ರೌಢಶಾಲೆ ಶಿಕ್ಷಕ ಡಿ.ಎಸ್. ಪ್ರಭು ಹಾಗೂ ಅವರ ಪತ್ನಿ ಸುಮ ಚಳ್ಳಕೆರೆಗೆ ತೆರಳುತ್ತಿದ್ದರು. ಈ ಎರಡು ಬೈಕ್‌ಗಳು ರಾಜ್ಯ ಹೆದ್ದಾರಿ 45 ರ ಕಾಟವ್ವನಹಳ್ಳಿ ಬಳಿ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ತಿಪ್ಪೇಸ್ವಾಮಿಯವರ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದ ಮಗು ಶ್ರಾವಣಿ ಆಯತಪ್ಪಿ ಡಾಂಬರ್ ರಸ್ತೆ ಮೇಲೆ ರಭಸವಾಗಿ ಬಿದ್ದಿದ್ದಾಳೆ. ಮಗುವಿನ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದೆ.
ಸ್ಥಳೀಯರು ಗಾಯಾಳುಗಳನ್ನು ನಾಯಕನಹಟ್ಟಿ ಹಾಗೂ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ನಂತರ ಪುತ್ರಿಯ ಶವವನ್ನಿಟ್ಟುಕೊಂಡು ರೋಧಿಸುತ್ತಿದ್ದ ದಂಪತಿಗಳ ಶೋಕ ಮುಗಿಲು ಮುಟ್ಟುವಂತಿತ್ತು. ತೀವ್ರವಾಗಿ ಗಾಯಗೊಂಡಿರುವ ಪ್ರಭು ಹಾಗೂ ಸುಮ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅತಿವೇಗದ ಬೈಕ್ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ನಾಯಕನಹಟ್ಟಿ ಪಿಎಸ್’ಐ ಮಹೇಶ ಹೊಸಪೇಟೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post