ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ಆತಂಕದಲ್ಲೇ ಜಿಲ್ಲೆಯ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿ ದೊಡ್ಡ ರಥೋತ್ಸವ ಸಂಪ್ರದಾಯಬದ್ಧವಾಗಿ ಸರಳವಾಗಿ ನಡೆಯಿತು.
ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಾತ್ರೆಗೆ ಮುನ್ನ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಎಸ್‌ಪಿ ಜಿ.ರಾಧಿಕಾ ಗ್ರಾಮಸ್ಥರ ಜತೆ ಸಭೆ ನಡೆಸಿ, ಕೋವಿಡ್ ತೀವ್ರತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಅಧಿಕಾರಿಗಳ ಆದೇಶದಂತೆ ಜಿಲ್ಲೆಯ ಜನತೆ ಹಾಗೂ ರಾಜ್ಯದ ವಿವಿಧೆಡೆಯ ಭಕ್ತರು ಗ್ರಾಮದತ್ತ ಹೆಜ್ಜೆ ಹಾಕದೆ ಮನೆಗಳಲ್ಲೇ ಸ್ವಾಮಿಗೆ ಪೂಜೆ ಸಲ್ಲಿಸಿದರು. ಹೋಬಳಿ ಸುತ್ತಮುತ್ತಲಿನ ಭಕ್ತರು ಮಾತ್ರ ರಥೋತ್ಸವಕ್ಕೆ ಆಗಮಿಸಿ ದೊಡ್ಡ ರಥವನ್ನು ಎಳೆದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಎಸ್‌ಪಿ ಜಿ.ರಾಧಿಕಾ ಅವರ ಸೂಚನೆಯಂತೆ ಪೊಲೀಸ್ ಇಲಾಖೆ ಹಾಗೂ ಡಿಎಚ್‌ಒ ಡಾ.ಸಿ.ಎಲ್. ಫಾಲಾಕ್ಷ ನೇತೃತ್ವದ ಆರೋಗ್ಯ ಇಲಾಖೆ ತಂಡ ಕೊಂಚ ಹೆಚ್ಚಾಗಿ ಮುಂಜಾಗ್ರತೆ ವಹಿಸಿತು. ರಥ ಸಾಗುತ್ತಿದ್ದ ಮಾರ್ಗದಲ್ಲೂ ಇಡೀ ತಂಡ ಸಾಗುತ್ತಾ ಮಾಸ್ಕ್ ಧರಿಸಲು ಸೂಚಿಸುತ್ತಿದ್ದರು.
ಜಿಲ್ಲಾಡಳಿತದ ಅವಿರತ ಶ್ರಮದ ಫಲವಾಗಿ ಕೊರೋನಾ ನಡುವೆಯೂ ಅಚ್ಚುಕಟ್ಟಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರ ಮೂಲಕ ಜಾತ್ರಾ ಮಹೋತ್ಸವವನ್ನು ಸೂಸೂತ್ರವಾಗಿ ನಡೆಯುವಂತಾಗಲು ಸಹಕರಿಸಿದ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಗೆ ಶಾಸಕ ಟಿ.ರಘುಮೂರ್ತಿ ಧನ್ಯವಾದ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post