ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿರಿಗೆರೆ ಬಳಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಒರ್ವ ಬಾಲಕ ಸೇರಿದಂತೆ ದಂಪತಿಯನ್ನು ಕೂಡಲೇ ಅಸ್ಪತ್ರೆಗೆ ದಾಖಲಿಸಿ ಅವರ ಜೀವ ಉಳಿಸುವಲ್ಲಿ ನೆರವಾಗಿ ಸಭಾಪತಿ ಬಸವರಾಜ ಹೊರಟ್ಟಿ ಮಾನವೀಯತೆ ಮೆರೆದಿದ್ದಾರೆ.
ಘಟನೆ ಹಿನ್ನೆಲೆ:
ಕಚೇರಿ ಕಾರ್ಯ ಕಲಾಪ ಮುಗಿಸಿ ಹುಬ್ಬಳ್ಳಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಂದು ಬೆಳಿಗ್ಗೆ ಬೆಂಗಳೂರಿನಿಂದ ತೆರಳುತ್ತಿದ್ದ ಸಭಾಪತಿ ಬಸವರಾಜ ಹೊರಟ್ಟಿಯವರು ಮಾರ್ಗ ಮಧ್ಯದಲ್ಲಿ ಸಿರೆಗೆರೆ ಬಳಿ ತಮ್ಮ ಕಣ್ಣೆದುರಿಗೆ ಸಂಭವಿಸಿದ ಅಪಘಾತ ಗಮನಿಸಿ, ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದರು.
ಅಲ್ಲದೇ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಬೇಗನೆ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು. ಹಾಗೂ ಆಂಬುಲೆನ್ಸ್‍ಗೆ ಕರೆಮಾಡಿ ಮೂವರು ಗಾಯಾಳುಗಳನ್ನು ಶೀಘ್ರದಲ್ಲಿಯೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಸುಮಾರು ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಅಪಘಾತ ಸ್ಥಳದಲ್ಲಿಯೇ ಇದ್ದು ಗಾಯಾಳುಗಳಿಗೆ ಧೈರ್ಯ ಹೇಳಿ ಅವರಿಗೆ ತುರ್ತು ಚಿಕಿತ್ಸೆ ದೊರಕಿಸುವಲ್ಲಿ ಶ್ರಮಿಸಿದರು.
ಸಭಾಪತಿ ಬಸವರಾಜ ಹೊರಟ್ಟಿಯವರು ಸಂವಿಧಾನಿಕ ದೊಡ್ಡ ಹುದ್ದೆಯಲ್ಲಿದ್ದರೂ ಜನಸಾಮಾನ್ಯರ ಕಷ್ಟಗಳಿಗೆ ಕೂಡಲೇ ಪ್ರತಿಸ್ಪಂದಿಸಿ ನೆರವಾಗುವ ಮಾನವೀಯ ಗುಣ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















