ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ಆಟೋ ಸ್ನೇಹಿ ಡೇಟಾ ಬೇಸ್ಡ್’ನಿಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಆಟೋ ಚಾಲಕರುಗಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಚಳ್ಳಕೆರೆ ಉಪ ವಿಭಾಗದ ವತಿಯಿಂದ ಪೊಲೀಸ್ ಪೆರೇಡ್ ಮೈದಾನದಲ್ಲಿ ಆಟೋ ಸ್ನೇಹಿ ಡಿಜಿಟಲ್ ಆಪ್ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿಯಾಗಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಚಳ್ಳಕೆರೆಯಲ್ಲಿ ಆಟೋ ಸ್ನೇಹಿ ಲಾಂಚ್ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಬೇರೆ ಬೇರೆ ತಾಲೂಕಿಗೂ ಇದನ್ನು ವಿಸ್ತರಿಸಲಾಗುವುದು. ಮೋಟಾರು ವಾಹನ ಕಾಯ್ದೆ 84 ಜಿ. ಪ್ರಕಾರ ಎಲ್ಲಾ ಆಟೋಗಳಲ್ಲೂ ಡಿಸ್ಪ್ಲೆ ಮಾಡಬೇಕು. ಇದರಿಂದ ಆಟೋ ಚಾಲಕ/ಮಾಲೀಕನ ಸಂಪೂರ್ಣ ಇತಿಹಾಸವೇ ತಿಳಿಯಬಹುದು. ಇದು ಆಟೋ ಏರುವ ಪ್ರಯಾಣಿಕರು ಹಾಗೂ ಚಾಲಕರಿಗೂ ಸುರಕ್ಷತೆ. ಎಲ್ಲಿಯಾದರೂ ಆಟೋ ಚಾಲಕರು ಕ್ರಿಮಿನಲ್ ಅಪರಾಧವೆಸಗಿದರೆ ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಹೇಳಿದರು.
ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಮಹಲಿಂಗ ನಂದಗಾವಿ ಮಾತನಾಡಿ, ಆಟೋ ಸ್ನೇಹಿಯಿಂದ ಚಾಲಕರು ಸಂಪೂರ್ಣ ದಾಖಲೆಗಳನ್ನು ಸರಿಯಾಗಿರಿಸಿಕೊಳ್ಳಬೇಕಾಗುತ್ತದೆ. ಪೊಲೀಸರು ಎಲ್ಲೆಂದರಲ್ಲಿ ಆಟೋಗಳನ್ನು ತಡೆದು ಲೈಸೆನ್ಸ್, ಪರ್ಮಿಟ್, ಇನ್ಸುರೆನ್ಸ್ ಇವ್ಯಾವುಗಳನ್ನು ಕೇಳುವುದಿಲ್ಲ. ಎಲ್ಲಾ ಮಾಹಿತಿಯೂ ಆಟೋ ಸ್ನೇಹಿಯಲ್ಲಿ ಲಭ್ಯವಿರುತ್ತದೆ. ಪರವಾನಗಿ ನವೀಕರಿಸಿಕೊಳ್ಳದಿದ್ದರೆ. ಜೀವವಿಮೆ ಪಾವತಿಸದಿದ್ದರೆ ಅಂತಹ ಚಾಲಕರು ಮಾಲೀಕರುಗಳಿಗೆ ಎಚ್ಚರಿಸುತ್ತೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಂದ ಆಟೋಗಳಿಗೆ ಸೀರಿಯಲ್ ಸಂಖ್ಯೆ ನೀಡಿ ಆಟೋ ಎರಡು ಬದಿಗಳಲ್ಲಿ ರಿಫ್ಲೆಕ್ಟರ್ ಸ್ಟಿಕರ್‌ಗಳನ್ನು ಅಂಟಿಸಲಾಗುವುದು. ಇದರಿಂದ ಆಟೋ ಚಾಲಕರು ತಪ್ಪಿನಿಂದ ನುಣುಚಿಕೊಳ್ಳಲು ಅವಕಾಶವಿಲ್ಲ ಎಂದರು.
ಒಂದು ಬಗೆಯಲ್ಲಿ ಇದು ಎಲ್ಲರಿಗೂ ಸುರಕ್ಷತೆ. ವಿಶೇಷವಾಗಿ ಮಹಿಳೆಯರು ನಿರ್ಭಯವಾಗಿ ಆಟೋದಲ್ಲಿ ಸಂಚರಿಸುವಂತಾಗುತ್ತದೆ. ಚಾಲಕರುಗಳು ಲೈಸೆನ್ಸ್ ಮಾಡಿಸಿಕೊಳ್ಳುವುದಕ್ಕಾಗಲಿ, ನವೀಕರಣ, ಇನ್ಸುರೆನ್ಸ್ ಇವುಗಳೆಲ್ಲವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು. ನಿರ್ಲಕ್ಷ, ಸೋಮಾರಿತನ ತೋರಿದರೆ ಸಹಿಸುವುದಿಲ್ಲವೆಂಬ ಎಚ್ಚರಿಕೆ ನೀಡಿದರು.
ಆಟೋ ಸ್ನೇಹಿ ಜಿಲ್ಲೆಯಾದ್ಯಂತ ಆರಂಭಗೊಂಡಾಗ ಅವರವರ ಜಾಗಗಳಲ್ಲಿ ಮಾತ್ರ ಚಾಲಕರು ಆಟೋಗಳನ್ನು ಚಲಾಯಿಸಬಹುದು. ಸಾರ್ವಜನಿಕರು ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಟೋ ಸ್ನೇಹಿ ನೊಂದಣಿ ಮಾಡಿಸಿಕೊಳ್ಳುವುದರಿಂದ ಎಲ್ಲಾ ರೀತಿಯ ಉಪಯೋಗವಿದೆ. ಇದಕ್ಕಾಗಿ ಸದ್ಯದಲ್ಲಿಯೇ ಸ್ಪೆಷಲ್ ಡ್ರೆûವ್ ಮಾಡಲಾಗುವುದು. ದಾಖಲೆಗಳು ನಿಮ್ಮ ಒಳಿತಿಗಾಗಿ ಇರಬೇಕು. ಕೆಲವೊಮ್ಮೆ ಅಪಘಾತಗಳಾಗಿ ಸಾವು ಸಂಭವಿಸಿದಾಗ ಲೈಸೆನ್ಸ್, ಇನ್ಸುರೆನ್ಸ್ ಇಲ್ಲದಿದ್ದರೆ ಯಾರಿಗೂ ಪರಿಹಾರ ಸಿಗುವುದಿಲ್ಲ. ನಿಮ್ಮ ಸಹಕಾರ ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಗೆ ಬೇಕು ಎಂದು ಚಳ್ಳಕೆರೆ ತಾಲ್ಲೂಕು ಆಟೋ ಚಾಲಕರುಗಳಲ್ಲಿ ಮನವಿ ಮಾಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಹೆಗಡೆ ಮಾತನಾಡಿ, ಚಿತ್ರದುರ್ಗ ಸ್ಮಾರ್ಟ್ ಜಿಲ್ಲೆ ಆಗದಿರಬಹುದು. ಆದರೆ ಆಟೋ ಸ್ನೇಹಿ ಮಾತ್ರ ಸ್ಮಾರ್ಟ್ ಕಾರ್ಯಕ್ರಮ. ಕೆಲವರು ಆಟೋ ಒಡಿಸುತ್ತಾರೆ. ಆದರೆ ಲೈಸೆನ್ಸ್ ಇರುವುದಿಲ್ಲ. ಪರ್ಮಿಟ್ ಮುಗಿದರೂ ನವೀಕರಣ ಮಾಡಿಸುವುದಿಲ್ಲ. ಆಟೋ ಸ್ನೇಹಿ ಎಲ್ಲಾ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಯಾವುದೇ ಕಾರಣಕ್ಕೂ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬೇಡಿ. ಪರವಾನಗಿ, ಪರ್ಮಿಟ್, ನವೀಕರಣಕ್ಕೆ ನೇರವಾಗಿ ನನ್ನ ಕಚೇರಿಗೆ ಬನ್ನಿ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಚಳ್ಳಕೆರೆ ಡಿವೈಎಸ್’ಪಿ ಶ್ರೀಧರ್ ಮಾತನಾಡಿ, ಚಳ್ಳಕೆರೆಯಲ್ಲಿ ಪ್ರತಿ ತಿಂಗಳು ಕ್ಯಾಂಪ್ ಮಾಡಲು ಸಾರಿಗೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಅವರ ಪ್ರಕಾರ ಎಲ್ಲಕ್ಕೂ ಕ್ಯಾಂಪ್‌ನಲ್ಲಿ ಪರಿಹಾರ ಸಿಗುವುದಿಲ್ಲ. ಹಾಗಾಗಿ ಕಚೇರಿಗೆ ಹೋಗಬೇಕಾಗುತ್ತದೆ. ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲ್ಲೂಕು ಸೇರಿ ಆರ್’ಟಿಓ, ಎಆರ್’ಟಿಓ, ಕಚೇರಿ ತೆರೆಯುವ ಸಂಬಂಧ ಸರ್ಕಾರ ಕೇಳಿರುವ ಮಾಹಿತಿ ನೀಡಿವುದಾಗಿ ಸಾರಿಗೆ ಅಧಿಕಾರಿಗಳು ತಿಳಿದಿದ್ದಾರೆ. ಆಟೋ ಚಾಲಕರು ಮತ್ತು ಮಾಲೀಕರು ಪೊಲೀಸ್ ಇಲಾಖೆ ಹಾಗೂ ನಮ್ಮ ಇಲಾಖೆ ಜೊತೆ ಕೈಜೋಡಿಸಿ ಸಂಪೂರ್ಣ ದಾಖಲೆಗಳನ್ನಿಟ್ಟುಕೊಳ್ಳಿ. ಇದರಿಂದ ಅಪರಾಧಗಳನ್ನು ತಡೆಯಬಹುದು. ಆಟೋ ಚಾಲಕರುಗಳಿಗೆ ಸಾಕಷ್ಟು ಸಮಸ್ಯೆಗಳಿವೆ ಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಆಟೋ ಸ್ನೇಹಿ ಮೂಲಕ ಹಂತ ಹಂತವಾಗಿ ಎಲ್ಲವನ್ನು ಬಗೆಹರಿಸೋಣ ಎಂದರು.
ಚಳ್ಳಕೆರೆ ತಾಲೂಕು ಜೈ ಕರ್ನಾಟಕ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಬಿ. ನಾಗರಾಜ್ ಆಟೋ ಚಾಲಕರ ಹಲವಾರು ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಚಿತ್ರದುರ್ಗ ಸಶಸ್ತ್ರ ಮೀಸಲು ಪಡೆಯ ಡಿವೈಎಸ್’ಪಿ ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು. ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್‌ಗಳು ಚಳ್ಳಕೆರೆ ವೃತ್ತ ನಿರೀಕ್ಷಕ ನೆಲವಾಗಲು ಮಂಜುನಾಥ, ಪಿಎಸ್‌ಐ ಮಂಜುನಾಥ ಲಿಂಗಾರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post