ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಮನುಷ್ಯ ಮಕ್ಕಳ ಪಾಲನೆ ಪೋಷಣೆಗೆ ಸೀಮಿತವಾಗಿದ್ದು, ಸಸ್ಯಪಾಲನೆ, ಪಶುಪಾಲನೆಯ ಕಡೆಗೆ ಗಮನ ಕೊಡುತ್ತಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಸೀಬಾರದಲ್ಲಿ ಆಯೋಜಿಸಿದ್ದ ಜಾನುವಾರು ಜಾತ್ರೆಯಲ್ಲಿ ಮಾತನಾಡಿ, ಇಂದಿನ ಜಾತ್ರೆಗಳಲ್ಲಿ ಜನಗಳ ಸಂಖ್ಯೆ ಹೆಚ್ಚಾಗುತ್ತಿದೆ. ದನಗಳ ಸಂಖ್ಯೆ ಕಮ್ಮಿಯಾಗಿ ಹಾಲು ಉತ್ಪಾದನೆ ಸಹ ಕುಗ್ಗಿದೆ ಎಂದರು.
ಗುರುಪಾದ ಸ್ವಾಮಿಗಳ ಸ್ಮರಣೆಗಾಗಿ ಈ ಜಾತ್ರೆಯನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಗುರುಪಾದ ಸ್ವಾಮಿಗಳು ತಪಸ್ವಿಗಳು ಗವಿಮಠದಲ್ಲಿ ಏಕಾಂತವಾಗಿ ಧ್ಯಾನ ಮಾಡಿ ಸಮಾಜದಲ್ಲಿ ಶಾಂತಿ, ಸಹನೆ, ಬೋಧನೆ ಮಾಡಿದ್ದಾರೆ. ಮುರುಘಾಮಠದ ಗುರುಗಳಾಗಿ ಸಮಾಜ ಸೇವೆ ಮಾಡಿದ್ದಾರೆ. ಅವರ ಗದ್ದುಗೆ ಶ್ರೀಮಠದಲ್ಲಿದೆ. ಜಯದೇವ, ಜಯವಿಭವ ಮತ್ತು ಮಲ್ಲಿಕಾರ್ಜುನ ಶ್ರೀಗಳು ಇವರೆಲ್ಲರು ಗದ್ದುಗೆಯಲ್ಲಿ ಪೂಜೆ ಪ್ರಸಾದ ಧ್ಯಾನವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಬೇಸಿಗೆ ಕಾಲದಲ್ಲಿ ಜನರಿಗೆ ಮಜ್ಜಿಗೆ ಕೊಡಿ. ಹಾಲು, ಮೊಸರು, ಬೆಣ್ಣೆ, ತುಪ್ಪ, ಪೇಡಾ ತಿನಿಸುಗಳಿಗೆ ಹಾಲು ಅತ್ಯವಶ್ಯಕ. ಹೀಗಾಗಿ ಪಶುಪಾಲನೆ ಅತಿಮುಖ್ಯವಾಗಿದ್ದು ಎತ್ತು, ಎಮ್ಮೆ, ಆಕಳು, ಕುರಿ, ಮೇಕೆಗಳನ್ನು ಸಾಕಿ ಕೃಷಿ ಕೃತ್ಯಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಪಶುಪಾಲನೆಯಲ್ಲಿ ತೊಡಗಿಸಿಕೊಳ್ಳಿ ಎಂದರು.
ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲೇ ಏಕೈಕ ಜಾನುವಾರು ಜಾತ್ರೆ ನಡೆಯುವ ಸ್ಥಳ ಸೀಬಾರವಾಗಿದೆ. ಹಿಂದೆ ಕುಟುಂಬ ವ್ಯವಸ್ಥೆಯಲ್ಲಿ ಜನರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿದ್ದು ದನಕರುಗಳನ್ನು ಸಾಕುತ್ತಿದ್ದರು. ಈಗ ಮನೆಯಲ್ಲಿ ಜನವೂ ಕಮ್ಮಿ ಪಶುಪಾಲನೆ ಪದ್ಧತಿಯು ಕಡಿಮೆಯಾಗಿದೆ ಎಂದು ಬೇಸರಿಸಿದರು.
ರಾಸಾಯನಿಕ ಗೊಬ್ಬರ ಬಳಸಿ ಆರೋಗ್ಯವನ್ನು ಕಳೆದುಕೊಂಡಿದ್ದೇವೆ. ಜಾನುವಾರುಗಳಿಂದ ದೊರೆಯುವ ಸಾವಯವ ಗೊಬ್ಬರದಿಂದ ಭೂಮಿ ಫಲವತ್ತತೆಯಾಗುತ್ತದೆ. ಜನರ ಆರೋಗ್ಯವು ಸದೃಢವಾಗುತ್ತದೆ. ಯಾಂತ್ರಿಕತೆಯಿಂದ ಜಾನುವಾರ ಸಂಪತ್ತು ಕಳೆದುಕೊಳ್ಳುತ್ತಿದ್ದು, ಜಾನುವಾರು ತಳಿಗಳನ್ನು ಸಾಕುವ ಮೂಲಕ ರೈತರು ಹಳೇ ಪದ್ಧತಿಗೆ ಮರಳಿ ಬರಬೇಕು ಎಂದರು.
ಗ್ರಾ.ಪಂ ಸದಸ್ಯ ರಾಮಾಂಜನೇಯ ಮಾತನಾಡಿ, ಮುರುಘಾಮಠದಿಂದ 66 ವರ್ಷಗಳಿಂದ ಈ ಜಾತ್ರೆ ನಿರಂತರವಾಗಿ ನಡೆಯುತ್ತ ಬಂದಿದೆ. ಇಲ್ಲಿ ನಡೆಯುವ ಜಾತ್ರೆಯಲ್ಲಿ ಈ ಹಿಂದೆ 10 ಸಾವಿರ ಜೋಡಿ ಎತ್ತುಗಳು ಭಾಗವಹಿಸಿದ ಉದಾಹರಣೆಗಳಿವೆ. ಈಗ ಲಾಭದ ಹಿಂದೆ ಹೋಗಿ ಮಾನವ ಜಾನುವಾರು ಸಾಕುವುದನ್ನೆ ಬಿಟ್ಟಿದ್ದಾನೆ. ಸಗಣಿ ಕಸ ಹೊಡೆಯುವ ಪದ್ಧತಿ ಕಣ್ಮರೆಯಾಗಿದೆ. ಎಲ್ಲರೂ ನಗರಗಳಿಗೆ ದುಡಿಯಲು ವಲಸೆ ಹೋಗುತ್ತಿರುವುದು ದುರದೃಷ್ಟಕರ. ಮುರುಘಾ ಶರಣರು ಜಾತ್ರೆಗೆ ಬೇಕಾದ ನೀರು, ಬೆಳಕು ಇನ್ನಿತರೆ ವ್ಯವಸ್ಥೆಯನ್ನು ಕಲ್ಪಿಸಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ ಎಂದರು.
ಶ್ರೀಗಳು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿದರು. ಜಾತ್ರೆಯಲ್ಲಿ ಹಳ್ಳಿಕಾರ್, ಅಮೃತ್ ಮಹಲ್ ಇನ್ನಿತರೆ ತಳಿಗಳ ೨೫೦ಕ್ಕು ಹೆಚ್ಚು ಜೋಡಿ ಎತ್ತುಗಳು ಭಾಗವಹಿಸಿದ್ದವು.
ಎಂ.ಕೆ.ಹಟ್ಟಿ ಗ್ರಾ.ಪಂ ಅಧ್ಯಕ್ಷೆ ಬಿ.ಗೀತಾ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕೌಸಲ್ಯ ತಿಪ್ಪೇಸ್ವಾಮಿ, ತಾ.ಪಂ. ಸದಸ್ಯೆ ರಾಧಮ್ಮ ಜಗದೀಶ್, ಪ್ರಕಾಶ್, ಡಾ.ಕೃಷ್ಣಪ್ಪ, ಡಾ.ಬಿ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post