ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪದೇ ಪದೇ ಪೋಲೀಸ್ ನಿಮ್ಮ ಮನೆ ಬಳಿ ಬಂದರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಮಾಜದಲ್ಲಿ ಕೀಳು ಮನೋಭಾವದಿಂದ ನಿಮ್ಮನ್ನು ಜನರು ನೋಡುತ್ತಾರೆ. ಇದರಿಂದ ನೀವು ದೂರ ಇರಬೇಕಾದರೆ ಕಳ್ಳತನ, ದರೋಡೆ, ರೌಡಿ ಕೃತ್ಯಗಳಿಂದ ದೂರವಿದ್ದು ಸನ್ನಡತೆ ರೂಢಿಸಿಕೊಳ್ಳಿ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಆರ್. ರಾಧಿಕಾ ಎಚ್ಚರಿಕೆ ನೀಡಿದರು.
ನಗರದ ಚಿತ್ರದುರ್ಗ ರಸ್ತೆ ಡಿವೈಎಸ್’ಪಿ ಕಚೇರಿ ಆವರಣದಲ್ಲಿ ನಡೆದ ಚಳ್ಳಕೆರೆ, ನಾಯಕನಹಟ್ಟಿ, ಮೊಳಕಾಲ್ಮೂರು, ರಾಂಪುರ, ಪರಶುರಾಂಪುರ, ತಳಕು ಠಾಣೆ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್’ಗಳಿಗೆ ಪರೇಡ್ ನಡೆಸಿ ಖಡಕ್ ವಾರ್ನಿಗ್ ನೀಡಿದರು.
ನೀವು ಮಾಡುವ ಕೆಟ್ಟ ಕೆಲಸಗಳಿಂದ ನಿಮ್ಮ ಕುಟುಂಬ ಹಾಗೂ ನಿಮ್ಮ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತದೆ. ಇದರಿಂದ ಗಲಾಟೆ, ಕಳ್ಳತನ, ದುಶ್ಚಟ, ದೊಂಬಿ, ದರೋಡೆ, ಕೊಲೆ, ಕೊಲೆ ಯತ್ನ ಇತರೆ ಅಪರಾಧ ಕೃತ್ಯಗಳಿಂದ ದೂರ ಉಳಿದು ಸನ್ನಡತೆ ರೂಢಿಸಿಕೊಂಡು, ಉತ್ತಮ ಜೀವನ ರೂಪಿಸಿಕೊಳ್ಳಿ. ನೀವು ಮಾಡುವ ಕೆಟ್ಟ ಕೆಲಸಗಳಿಂದ ನಿಮ್ಮ ಜೀವನ ಹಾಳಾಗಿ ಹೋಗುತ್ತದೆ. ಜೊತೆಗೆ ನಿಮ್ಮ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಸಮಾಜದಲ್ಲಿ ನಿಮ್ಮನ್ನು ಕೀಳು ಭಾವನೆಯಿಂದ ನೋಡುತ್ತಾರೆ, ನಿಮ್ಮ ನೆಂಟರು, ಬಂಧು ಬಳಗದವರು ದೂರವಾಗುತ್ತಾರೆ. ಇದರಿಂದ ರೌಡಿತನ, ಮಟ್ಕ, ಜೂಜಾಟ, ಅಕ್ರಮ ಮರಳು ಸಾಗಾಟ, ಗಲಾಟೆ, ದೊಂಬಿ ಇಂತಹ ಕೃತ್ಯಗಳಿಂದ ಹೊರಬಂದು ಉತ್ತಮ ಮಾರ್ಗದಲ್ಲಿ ಜೀವನ ಸಾಗಿಸಿ. ಇಲ್ಲಾವಾದರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಿವೈಎಸ್’ಪಿ ರೋಷನ್ ಜಮೀರ್, ನಗರ ಪಿಎಸ್‌ಐ ಎಸ್.ಡಿ. ನೂರ್ ಆಹ್ಮಾದ್, ನಾಯಕನಹಟ್ಟಿ ಪಿಎಸ್’ಐ ರಘುನಾಥ, ಮುಖ್ಯ ಪೇದ ಮಂಜಣ್ಣ, ಪೇದೆಗಳಾದ ತಿಮ್ಮಣ್ಣ, ರಂಗನಾಥ್, ತಿರುಕಪ್ಪ, ಏಕಾಂತರೆಡ್ಡಿ, ಪುರುಷೋತ್ತಮ, ವೆಂಕಟೇಶ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post