ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 14ರ ವಯೋಮಿತಿಯ ವಾಲಿಬಾಲ್ (Volleyball) ಪಂದ್ಯಾವಳಿಯಲ್ಲಿ ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕ್ರೈಸ್ಟ್‌ಕಿಂಗ್ (ChristKing) ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾಲಿಬಾಲ್ ಆಟಗಾರ್ತಿಯರನ್ನು ಭವ್ಯ ವಿಜಯೋತ್ಸವ ಮೆರವಣಿಗೆಯ ಮೂಲಕ ಸ್ವಾಗತಿಸಿ ಸನ್ಮಾನಿಸಲಾಯಿತು.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಶಾಲೆ ಹಾಗೂ ಕಾರ್ಕಳಕ್ಕೆ ಕೀರ್ತಿ ತಂದ ಆಟಗಾರ್ತಿಯರನ್ನು ಕಾರ್ಕಳದ ಅನಂತಶಯನದಿಂದ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯವರೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಸಾಧಕ ವಿದ್ಯಾರ್ಥಿನಿಯರ ಹೆತ್ತವರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿ ಅಭಿನಂದಿಸಿದರು. ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ChristKing: ಏಳು ವಿದ್ಯಾರ್ಥಿನಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆ
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಾಲಿಬಾಲ್ ತಂಡದ ಏಳನೇ ತರಗತಿಯ ತ್ರಿಷ್ಮ, ಸೃಷ್ಟಿ ಎಸ್. ಪೂಜಾರಿ, ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸ ರುಬೇಲ್ ಡಿಸೋಜ, ಪ್ರನ್ವಿ ಎಸ್. ದೇವಾಡಿಗ ಹಾಗೂ ಆರನೇ ತರಗತಿಯ ನಿಶಾ ಡಿಸೋಜ ಮತ್ತು ಅಲಿಶಾ ಡಿಸೋಜ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕಿ, ಐಪಿಎಸ್ ಅಧಿಕಾರಿ ಇಶಿತಾ ಗುಪ್ತ ಮಾತನಾಡಿ, ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಇಂದು ಸಾಧನೆ ಮಾಡಿದ ವಾಲಿಬಾಲ್ ಆಟಗಾರ್ತಿಯರು ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿ ಅಭಿನಂದಿಸಿದರು.
ಪರಿಶ್ರಮವೇ ಸಾಧನೆಗೆ ಕಾರಣ
ಕಾರ್ಕಳ ಪುರಸಭೆ ಸದಸ್ಯ ಶುಭದ್ ರಾವ್ ಮಾತನಾಡಿ, ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ತರಬೇತುದಾರರ ನಿರಂತರ ಶ್ರಮ ಈ ಸಾಧನೆಗೆ ಕಾರಣವಾಗಿದೆ. ಕಾರ್ಕಳದ ಕೀರ್ತಿಯನ್ನು ಬೆಳಗಿಸಿರುವ ಈ ಸಾಧಕ ವಿದ್ಯಾರ್ಥಿನಿಯರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಕಳ ಸಾಣೂರು ವಲಯದ ಶಿಕ್ಷಣ ಸಂಯೋಜಕಿ ಜ್ಯೋತಿ ಮಾತನಾಡಿ, ಅವಿರತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಪ್ರತಿಭೆಯ ಮೂಲಕ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿರುವ ವಿದ್ಯಾರ್ಥಿನಿಯರು ಹೆಮ್ಮೆಯ ಮಾದರಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರಮಟ್ಟದಲ್ಲೂ ಕೀರ್ತಿ ಬೆಳಗಲಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳ ನಿರಂತರ ಪರಿಶ್ರಮ ಹಾಗೂ ತರಬೇತುದಾರರ ಪ್ರೋತ್ಸಾಹದ ಫಲವಾಗಿ ತಂಡ ರಾಜ್ಯಮಟ್ಟದಲ್ಲಿ ಚಾಂಪಿಯನ್ ಆಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಸಾಧನೆಯ ಹಿಂದೆ ವಿದ್ಯಾರ್ಥಿನಿಯರ ಅವಿರತ ಶ್ರಮವಿದೆ. ಮುಂದಿನ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ಈ ಮಣ್ಣಿನ ಕೀರ್ತಿಯನ್ನು ದೇಶದಾದ್ಯಂತ ಬೆಳಗಿಸಲಿ ಎಂದು ಹಾರೈಸಿದರು.
Also Read>> ಟೋಲ್ ಪ್ಲಾಜಾಗಳ ಬಳಿಯಲ್ಲಿ ವಾಸಿಸುವ ನಿವಾಸಿಗಳಿಗೆ ಕೇಂದ್ರ ಸರ್ಕಾರದ ಗುಡ್ ನ್ಯೂಸ್!
ಆಟಗಾರ್ತಿಯರು, ತರಬೇತುದಾರರಿಗೆ ಸನ್ಮಾನ
ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಅವರ ಸಾಧನೆಗೆ ಮಾರ್ಗದರ್ಶನ ನೀಡಿದ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್, ಕೃಷ್ಣಪ್ರಸಾದ್ ಹಾಗೂ ಕೀರ್ತನಾ ಅವರನ್ನೂ ಗೌರವಿಸಲಾಯಿತು.
ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಅವೆಲಿನ್ ಲೂಯಿಸ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಹಾಗೂ ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಸಿಸ್ಟರ್ ಜೆ. ಜಾಲಿ ಜೇಕಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಐ. ಕ್ರಿಸ್ಟೋಫರ್ ಕೋಟ್ಯಾನ್ ವಂದಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









