ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸಾಧನೀಯ ಭಾವನೆಯು ನಿಜಕ್ಕೂ ಶ್ಲಾಘನೀಯವಾಗಿದ್ದು, ಇದರಿಂದ ಮಹಿಳೆಯರ ಸ್ವಾವಲಂಭಿ ಬದುಕಿಗೆ ಮಾದರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ವತಿಯಿಂದ ಆಯೋಜಿಸಿದ್ದ ’ದಶಮಾನೋತ್ಸವ ಸಂಭ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಮಕ್ಕಳಿಗಾಗಿ ಮತ್ತು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಿಗಾಗಿ ಸ್ವರ್ಗವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮಹಿಳೆಯರಲ್ಲಿದೆ. ಇದರಿಂದ ಕೇವಲ ಕುಟುಂಬ ನಿರ್ವಹಣೆ ಮಾತ್ರವಲ್ಲ, ಇಡೀ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. ಮನೆಯಲ್ಲಿ ಮಹಿಳೆಯರು ನಿರ್ವಹಣೆ ಮಾಡುವ ಜವಾಬ್ದಾರಿಯುತವಾದ ಕಾರ್ಯಗಳಿಂದ ಇಡೀ ಸಂಸಾರವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಕ್ಷಮತೆ ಅವರಲ್ಲಿದೆ ಎಂದರು.
ಕೇವಲ ಗ್ರಾಮೀಣ ಭಾಗದ ಮಹಿಳೆಯರೇ ಸೇರಿ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ನೂರಾರು ಹೆಣ್ಣುಮಕ್ಕಳ ಸ್ವಾವಲಂಭಿ ಬದುಕಿಗೆ ಆಸರೆಯಾಗಿರುವ ಸಮೃದ್ದಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರ ನಿಯಮಿತವು ದಶಮಾನೋತ್ಸವ ಮಾತ್ರವಲ್ಲ ಶತಮಾನೋತ್ಸವವನ್ನು ಆಚರಿಸಿಕೊಳ್ಳುವಂತೆ ಬೆಳೆಯಬೇಕು. ಮಹಿಳೆಯರು ಕೇವಲ ಸಿನಿಮಾ ಮತ್ತು ಧಾರಾವಾಹಿಗಳನ್ನು ನೋಡಿ ಆದರ್ಶ ಜೀವನವನ್ನು ಮಾಡುವುದನ್ನು ಬಿಟ್ಟು ಸಮಾಜದಲ್ಲಿ ಸಾಧನೆ ಮಾಡಿರುವ ಸಾಧಕರ ಜೀವನಶೈಲಿಯನ್ನು ಅನುಸರಿಸಬೇಕಾಗಿದೆ. ಇದರಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ಇನ್ನಿತರರ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಮಹಿಳೆಯರು ಆರಂಭಿಸುವ ಪ್ರತಿಯೊಂದು ಸ್ವಾವಲಂಭಿ ಉದ್ಯೋಗದಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯಿಂದ ನಡೆಯಲು ಸಾಧ್ಯವಾಗುತ್ತದೆ. ಇದರ ಜೊತೆಯಲ್ಲಿ ಸಂಘದಿಂದ ಸಾಲವನ್ನು ಪಡೆದಂತಹ ಪ್ರತಿಯೊಬ್ಬರೂ ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಆರೋಗ್ಯಕರವಾದ ವ್ಯವಹಾರ ಮಾಡಲು ಕೈ ಜೋಡಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷರಾದ ಬಿ.ಎಚ್. ಕೃಷ್ಣಾರೆಡ್ಡಿ, ಗ್ರಾಮೀಣ ಭಾಗದಲ್ಲಿ ಆರಂಭವಾದ ಸಹಕಾರಿ ನಿಯಮಿತವು ಮಹಿಳೆಯರ ಬದುಕಿಗೆ ಆಸರೆಯಾಗಿ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಸಹಕಾರ ಸಂಘಗಳಿಗೆ ಬೆನ್ನೆಲುಬಾಗಿರುವ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರ ಪಾತ್ರ ಹೆಚ್ಚಾಗಿದೆ. ಮಹಿಳೆಯರು ನಿತ್ಯದ ಕಾರ್ಯ ಚಟುವಟಿಕೆಗಳ ಜೊತೆಯಲ್ಲಿ ಸಹಕಾರ ಸಂಘಗಳ ಸದ್ಬಳಕೆಯನ್ನು ಪಡೆದುಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸಿ ಕುಟುಂಬಕ್ಕೆ ಆಸರೆಯಾಗಬೇಕಾಗಿದೆ. ಇದಕ್ಕಾಗಿ ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳು ಲಭ್ಯವಿದ್ದು ಅವುಗಳ ಬಳಕೆಯನ್ನು ಪಡೆದುಕೊಳ್ಳುವಲ್ಲಿ ಎಲ್ಲರೂ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.
ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷರಾದ ಸಿ. ಗಂಗಲಕ್ಷ್ಮಮ್ಮ ಮಾತನಾಡಿ, ದಶಕದ ಹಿಂದೆ ಗ್ರಾಮೀಣ ಭಾಗದ ಮಹಿಳೆಯ ಸಬಲೀಕರಣಕ್ಕಾಗಿ ನಿಸ್ವಾರ್ಥ ಸೇವೆಯನ್ನು ಬಯಸಿ ಆರಂಭಿಸಿದ ಪತ್ತಿನ ಸಹಕಾರ ಸಂಘವು ಇಂದು ಸಾವಿರಾರು ಮಹಿಳೆಯರಿಗೆ ಆಸರೆಯಾಗಿರುವುದು ಸಂತಸದ ವಿಚಾರವಾಗಿದೆ. ಮಹಿಳೆಯರ ಸ್ವಾವಲಂಭಿ ಬದುಕಿಗೆ ಶ್ರಮಿಸಲು ದಶಕಗಳಿಂದ ಬೆನ್ನೆಲುಬಾಗಿ ಸಹಕಾರ ನೀಡಿದ ಎಲ್ಲರಿಗೂ ಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಶಕ್ತಿಮೀರಿ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಲು ಬದ್ಧರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಎನ್. ಜ್ಯೋತಿರೆಡ್ಡಿ, ಮಾಜಿ ಜಿಪಂ ಸದಸ್ಯರಾದ ಸಿ.ಆರ್. ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮಾಜಿ ನಿರ್ದೇಶಕರಾದ ನಾಗೇಂದ್ರಗುಪ್ತ, ಪ್ರಗತಿ ಗ್ರಾಮೀಣ ಬ್ಯಾಂಕ್’ನ ನಿವೃತ್ತ ವ್ಯವಸ್ಥಾಪಕರಾದ ಕೆ.ಎಂ. ಬಸವರಾಜು, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಕೇಂದ್ರ ಘಟಕದ ಅಧ್ಯಕ್ಷರಾದ ಡಿ.ಇ. ರವಿಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಿ.ವಿ. ವರಲಕ್ಷ್ಮಿ, ಪುರಸಭೆ ಮಾಜಿ ಸದಸ್ಯರಾದ ವಿಮಲಾಕ್ಷಿ, ಬಿಬಿಎಂಸಿ ಸದಸ್ಯರಾದ ನಾಗರಾಜು, ನಿವೃತ್ತ ಪ್ರಾಂಶುಪಾಲೆ ಸಿ.ನಾಗರತ್ನಮ್ಮ, ಸಿಡಿಪಿಒ ಕೆಂಪಹನುಮಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸೋಮಶೇಖರಯ್ಯ, ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಉಪಾಧ್ಯಕ್ಷೆ ರಾಜೇಶ್ವರಿ, ನಿರ್ದೇಶಕರಾದ ಶಾರದಮ್ಮ, ತುಳಿಸಮ್ಮ, ರಶ್ಮಿ, ಮೀನಾಕ್ಷಿ, ವರಲಕ್ಷ್ಮೀ, ವಿಜಯಲಕ್ಷ್ಮೀ, ಅನುರಾಧ, ವಿಜಯ ಎನ್. ಮೂರ್ತಿ, ರಾಧಮ್ಮ, ಎಂ.ಕೆ. ಬೃಂದಾದೇವಿ, ರೂಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಅರ್ಚನ, ಮುಖಂಡರಾದ ಪಿ.ಟಿ. ಶ್ರೀನಿವಾಸ್, ಜಿ.ಕೆ. ಸತೀಶ್, ಆರ್.ಪಿ. ಗೋಪಾಲಗೌಡ, ಬಿ.ಜಿ. ಗೋವಿಂದರಾಜು, ಪ್ರೇಮಲೀಲಾ, ರಾಮಣ್ಣ, ಸಂಧ್ಯಾಶ್ರೀನಿವಾಸ್, ಜಿ.ಕೆ. ಅರುಣ್ ಕುಮಾರ್, ಸಂಕೇತ್ ಶ್ರೀರಾಮ್, ಜಿ.ಕೆ. ರಮೇಶ್ ಕುಮಾರ್, ಪ್ರಭಾಕರ್, ಸಾಗಾನಹಳ್ಳಿ ಶಿವಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಪರವಾಗಿ ಅಶ್ವತ್ಥಪ್ಪ ಅವರು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ತಮ್ಮನ್ನು ಖಾಯಂಗೊಳಿಸುವಂತೆ ಮನವಿ ಪತ್ರ ನೀಡಿದರು.
ಕಾರ್ಯಕ್ರಮದಲ್ಲಿ ಪತ್ತಿನ ಸಹಕಾರಿ ನಿಯಮಿತದಲ್ಲಿ ಹೆಚ್ಚಿನ ವ್ಯವಹಾರ ಹಾಗೂ ಹೂಡಿಕೆ ಮಾಡಿದ ಮಹಿಳೆಯರನ್ನು, ನೂತನವಾಗಿ ನಗರಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರನ್ನು ಹಾಗೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಿವಿಧ ಸ್ಥಳೀಯ ಸಹಕಾರ ಸಂಘಗಳ ವತಿಯಿಂದ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಸನ್ಮಾನಿಸಿದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post