ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಸಮೀಪದ ಇರುವಕ್ಕಿಯಲ್ಲಿ ಆರಂಭಿಸಲಾಗುತ್ತಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕಟ್ಟಡವು ಆಗಸ್ಟ್ ಮೊದಲ ವಾರದಲ್ಲಿ ಪೂರ್ಣಗೊಂಡು ಸೆಪ್ಟಂಬರ್ ಮೊದಲ ವಾರದಿಂದಲೇ ತರಗತಿಗಳು ಆರಂಭಗೊಳ್ಳಿಲಿವೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು.
ಅವರು ಇಂದು ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಉದ್ದೇಶಿತ ನೂತನ ಕಟ್ಟಡ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಈ ಸಂಬಂಧ ಈಗಾಗಲೇ ನಿಗಧಿಪಡಿಸಿದ ಕಾಲಾವಧಿಯೊಳಗಾಗಿ ಕಟ್ಟಡಗಳನ್ನು ಪೂರ್ಣಗೊಳಿಸಿ, ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದವರು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ದೂರದೃಷ್ಠಿ ಹಾಗೂ ಚಿಂತನಫಲವಾಗಿ ನಿರ್ಮಾಣಗೊಳ್ಳುತ್ತಿರುವ ಈ ವಿಶ್ವವಿದ್ಯಾಲಯದ ಭೌತಿಕ ಕಟ್ಟಡಗಳ ನಿರ್ಮಾಣಕ್ಕೆ ಈಗಾಗಲೇ 121ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದ್ದು, ಇನ್ನು 33ಕೋಟಿ ರೂ.ಗಳ ಅಗತ್ಯವಿದೆ. ಈಗಾಗಲೇ ವಿವಿಯ ಕ್ಯಾಂಪಸ್‌ನೊಳಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಭರದಿಂದ ಸಾಗಿದೆ ಎಂದರು.
ದೇಶದ ಮಾದರಿ ವಿಶ್ವವಿದ್ಯಾಲಯಗಳಲ್ಲೊಂದಾಗಲಿರುವ ಕೃಷಿ ವಿಶ್ವವಿದ್ಯಾಲಯ ಈ ಭಾಗಕ್ಕೆ ಪ್ರವಾಸಕ್ಕೆ ಆಗಮಿಸುವವರಿಗೆ ಇದೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ ಅಲ್ಲದೇ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಡಾಗಿರುವ ಈ ಪ್ರದೇಶ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷತೆ ಪಡೆದುಕೊಳ್ಳಲಿದೆ ಎಂದರು.
ವಿಶ್ವವಿದ್ಯಾಲಯದ ಎರಡನೇ ಹಂತದ ಕಾಮಗಾರಿಗಳಿಗಾಗಿ ಕಳೆದ ಬಜೆಟ್‌ನಲ್ಲಿ 200 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಈ ಪೈಕಿ ಈಗಾಗಲೆ 40 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ಅನುದಾನವನ್ನು ಉದ್ದೇಶಿತ ಕೆಲಸಕಾರ್ಯಗಳಿಗಾಗಿ ಬಳಸಿಕೊಳ್ಳಲಾಗುವುದು ಎಂದರು.
ವಿಶ್ವವಿದ್ಯಾಲಯಕ್ಕೆ ನೀಡಲಾಗಿರುವ ಪ್ರದೇಶದಲ್ಲಿ ನೂರಾರು ಎಕರೆ ಭೂಪ್ರದೇಶ ಬಗರ್‌ಹುಕುಂ ಸಾಗುವಳಿದಾರರ ಹಿಡಿತದಲ್ಲಿದೆ. ಈ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸ್ಥಳೀಯವಾಗಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರೊಂದಿಗೆ ಸಮಾಲೋಚನೆ ನಡೆಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಲಾಗುವುದು. ಹಿಡುವಳಿದಾರರು ಆತಂಕಪಡುವ ಅಗತ್ಯವಿಲ್ಲ ಎಂದರು.
ಈ ವಿಶ್ವವಿದ್ಯಾಲಯವು ಶಿವಮೊಗ್ಗ ಜಿಲ್ಲೆಗೆ ಮುಕುಟಪ್ರಾಯವಾಗಲಿರುವುದು ಜಿಲ್ಲೆಯ ಎಲ್ಲರ ಹೆಮ್ಮೆ. ಇದು ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧಿಕಾರಾವಧಿಯ ಹೆಜ್ಜೆಗುರುತಾಗಿ ಉಳಿಯಲಿದೆ ಎಂದ ಅವರು ಈ ಕಟ್ಟಡಗಳ ನಿರ್ಮಾಣದಲ್ಲಿ ಲೋಪದೋಷ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ನಿರೀಕ್ಷೆಯಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತರಗತಿಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಸಕಾಲದಲ್ಲಿ ನಿರ್ಮಾಣಕಾರ್ಯ ಪೂರೈಸಿದಲ್ಲಿ ಅವರಿಗೆ ದೊರೆಯಬಹುದಾದ ಹಣವನ್ನು ಸಕಾಲದಲ್ಲಿ ಪಾವತಿಸಲು ಸರ್ಕಾರದ ವತಿಯಿಂದ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಕೆ. ನಾಯಕ್, ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಉಪವಿಭಾಗಾಧಿಕಾರಿ ನಾಗರಾಜನಾಯಕ್ ಸೇರಿದಂತೆ ವಿಶ್ವವಿದ್ಯಾಲಯ, ವಿವಿಧ ಇಲಾಖೆಗಳ ಅಧಿಕಾರಿಗಳು, ತಂತ್ರಜ್ಞರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post