ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ: ನೀರಾವರಿ, ಮೂಲಭೂತ ಸೌಕರ್ಯ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಹೇಳಿದರು.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹತ್ತಿರ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಬ್ಯಾರೇಜ್‌ಗೆ ಭೇಟಿ ನೀಡಿ, ಬಾಗಿನ ಅರ್ಪಿಸಿ ನಂತರ ಅವರು ಮಾತನಾಡಿದರು.
ಇನ್ನೂ ಮೂರು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರಲಿದ್ದು, ಈ ಅವಧಿಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಎಲ್ಲರೂ ಸೇರಿ ಚಿತ್ರದುರ್ಗ ಜಿಲ್ಲೆಯ ಸರ್ವಾಗೀಂಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಮೊಳಕಾಲ್ಮೂರು ಮತ್ತು ಚಳ್ಳಕೆರೆ ಕ್ಷೇತ್ರದ ಜನರ ಕುಡಿಯುವ ನೀರಿನ ಭವಣೆ ನಿವಾರಣೆಗಾಗಿ ತುಂಗಾಭದ್ರಾ ಹಿನ್ನೀರಿನ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ಜಾರಿಗೆ ತರಲಾಗಿದೆ. ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ನಮ್ಮ ಸರ್ಕಾರ ಮಾಡುತ್ತಿದೆ. ಜಿಲ್ಲೆಯ 78 ಕೆರೆಗಳಿಗೆ ನೀರು ನೀರು ಹರಿಸಲು ರಾಜ್ಯ ಸರ್ಕಾರ ರೂ. 618 ಕೋಟಿ ನೀಡಿದೆ ಎಂದರು.
ಸಾಮಾಜಿಕ ಅಂತರ ಕಾಪಾಡಿ
ಕೋವಿಡ್19 ಸಾಂಕ್ರಾಮಿಕ ರೋಗದಿಂದ ಪಾರಾಗಲು ಮನೆಯಿಂದ ಹೊರಬಂದಾಗ ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಈ ವೇಳೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಿಂದಾಗೆ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈತೊಳೆದುಕೊಂಡು ವೈಯಕ್ತಿಕ ಸ್ವಚ್ಛತೆ ಆದ್ಯತೆ ನೀಡಬೇಕು ಎಂದು ಸಚಿವರು ನಾಗರಿಕರಲ್ಲಿ ಮನವಿ ಮಾಡಿದರು.
ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ್19ಗೆ ಇಲ್ಲಿಯ ತನಕ ಯಾವುದೇ ಲಸಿಕೆ ಇಲ್ಲ ಹಾಗಾಗಿ ಕೋವಿಡ್19 ಲಸಿಕೆ ಬರುವ ತನಕ ಕಾಯಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಎ. ನಾರಾಯಣಸ್ವಾಮಿ, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಯಪಾಲಯ್ಯ, ಮುಖಂಡರಾದ ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮ್‌ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post