ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮುಂಬರುವ ನಗರಸಭೆಯಲ್ಲಿ ಅಮ್ ಆದ್ಮಿ ಪಕ್ಷ ಸ್ಪರ್ಧೆಗಾಗಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ, ಗೆಲುವಿಗಾಗಿ ಸ್ಪರ್ಧೆ ಮಾಡಲಿದೆ ಎಂದು ಎಎಪಿ ರಾಜ್ಯ ಉಸ್ತುವಾರಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಕೀಯ ಸಲಹೆಗಾರ ರೂಮಿಬಾಟಿ ಹೇಳಿದ್ದಾರೆ.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಪೂರ್ವಸಿದ್ದತಾ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಯ ಚುನಾವಣೆ ಮುಕ್ತಾಯವಾದ ನಂತರ ರಾಜ್ಯದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ನಿರ್ಧರಿಸಿದ್ದೇವೆ. ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಸ್ಪರ್ಧಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ಪಕ್ಷ ತನ್ನ ಅಸ್ತಿತ್ವ ಕಂಡುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಿಸಿಸಿ ಮಾನದಂಡವನ್ನು ಪರಿಗಣಿಸಲಾಗಿದೆ. ಸಿ-ಕರಪ್ಟ್ ಆಗಿರಬಾರದು, ಸಿ-ಕಮ್ಯೂನಲ್ ಆಗಿರಬಾರದು, ಸಿ-ಕ್ರಿಮಿನಲ್ ಆಗಿರಬಾರದು. ಇಂತಹ ಅಭ್ಯರ್ಥಿಗಳನ್ನು ಮಾತ್ರ ಪಕ್ಷ ಪರಿಗಣಿಸಲಿದೆ.
-ರೂಮಿಬಾಟಿ
ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಅಂತಾರಾಷ್ಟೀಯ ಮಟ್ಟದ ಗಮನ ಸೆಳೆದಿರುವ ಅಮ್ ಆದ್ಮಿ ಪಕ್ಷವನ್ನು ರಾಜ್ಯದಲ್ಲೂ ಸಹ ವಿಸ್ತರಣೆ ಮಾಡುವ ಉದ್ದೇಶದಿಂದ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದರು.
ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಎಂ.ಪಿ. ದರ್ಶನ್ ಜೈನ್ ಮಾತನಾಡಿ, ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ. ಪಕ್ಷದ ಸಿದ್ದಾಂತದಂತೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೇವಲ ಚುನಾವಣೆಗೆ ಸ್ಪರ್ಧಿಸುವುದು ಮುಖ್ಯವಲ್ಲ. ಗೆಲುವು ಸಾಧಿಸುವುದು, ಪ್ರಬಲ ಪೈಪೋಟಿ ನೀಡುವುದು ನಮ್ಮ ಗುರಿಯಾಗಿದೆ ಎಂದರು.ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಎಎಪಿ ಸರ್ಕಾರ ಎಂತಹ ಜನಪರ ಆಡಳಿದೆ ನೀಡಿದೆ ಎಂಬುದನ್ನು ದೇಶವೇ ನೋಡಿದೆ. ಇಂತಹ ಆಡಳಿತ ವ್ಯವಸ್ಥೆಯನ್ನು ದೇಶದಾದ್ಯಂತ ವಿಸ್ತರಣೆ ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಮಿಸ್ಡ್ ಕಾಲ್ ಕೊಡಿ, ಎಎಪಿ ಬೆಂಬಲಿಸಿ
ರಾಜ್ಯದಲ್ಲಿ ಅಮ್ ಆದ್ಮಿ ಪಕ್ಷವನ್ನು ಸಂಘಟಿಸುವ ದೃಷ್ಠಿಯಿಂದ ಮಿಸ್ಡ್ ಕಾಲ್ ಅಭಿಯಾನವನ್ನು ಆರಂಭಿಸಲಾಗಿದೆ. ಇದರ ಪೋಸ್ಟರನ್ನು ಮುಖಂಡರು ಇಂದು ಬಿಡುಗಡೆ ಮಾಡಿದ್ದು, ಸ್ವ ಇಚ್ಛೆಯಿಂದ ಎಎಪಿಯನ್ನು ಬೆಂಬಲಿಸುವವರು 7669400410 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬಹುದು.ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಪರಮೇಶ್ವರಚಾರ್, ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಬಾನು, ಕರವೇ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಮುಖಂಡ ವಿ. ಗೋಪಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಕ್ಷದ ಸ್ಥಳೀಯ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post