ಶಿಕಾರಿಪುರ: ಜಗತ್ತು ಮೆಚ್ಚುವ ರೀತಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಮೋದಿ ಮೋದಿ ಎನ್ನುತ್ತಿದ್ದಾರೆ. ಆದರೆ ಸತತ 10 ವರ್ಷಗಳ ಕಾಲ ಪ್ರಧಾನಿಯಾದ ಮನಮೋಹನ್ ಸಿಂಗ್ ಕೇವಲ ಸೋನಿಯಾ ರಬ್ಬರ್ ಸ್ಟಾಂಪ್ ಆಗಿದ್ದು, ಇದರಿಂದಾಗಿ ಮನಮೋಹನ್ ಸಿಂಗ್ ಹೆಸರು ಹೇಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದರು.
ಪಟ್ಟಣದ ಹಳೆ ಸಂತೆ ಮೈದಾನದಲ್ಲಿ ನಡೆದ ಬಿಜೆಪಿ ಬೃಹತ್ ಚುನಾವಣಾ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶ 54 ಲಕ್ಷ ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದಾಗ ಪ್ರಧಾನಿಯಾದ ಮೋದಿ ಜಗತ್ತು ಮೆಚ್ಚುವ ರೀತಿಯಲ್ಲಿ ಇದೀಗ ಹೊರ ದೇಶಗಳಿಗೆ ಸಾಲ ನೀಡುವ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಭಯೋತ್ಪಾದನಾ ದಾಳಿ ನಡೆದಾಗ ಜಗತ್ತಿನ ಇತರೆ ದೇಶಗಳು ಭಾರತವನ್ನು ಏಕಾಂಗಿಯಾಗಿಸುತ್ತಿದ್ದು ಇದೀಗ ಪಾಕ್ ಏಕಾಂಗಿಯಾಗುವ ರೀತಿಯಾಗಿದೆ ಸಾಲದ ಸುಳಿಯಲ್ಲಿ ಸಿಲುಕಿದ್ದ ದೇಶ ಇದೀಗ ಆರ್ಥಿಕ ಪ್ರಗತಿ ಸಾಧಿಸಿದೆ. ಇದಕ್ಕಾಗಿ ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದೇವೆ. ಸತತ 10 ವರ್ಷ ಪ್ರಧಾನಿಯಾದ ಮನಮೋಹನ್ ಸಿಂಗ್ ಕೇವಲ ಸೋನಿಯಾ ರಬ್ಬರ್ ಸ್ಟಾಂಪ್ ಪ್ರಧಾನಿಯಾಗಿದ್ದು, ಇದಕ್ಕಾಗಿ ಕಾಂಗ್ರೆಸ್ ಮುಖಂಡರಿಗೆ ಹೆಸರು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಪುಲ್ವಾಮದ ದಾಳಿ ಬಗ್ಗೆ ಎರಡು ವರ್ಷ ಹಿಂದೆ ತಿಳಿದಿತ್ತು ಎನ್ನುವ ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ಏಕೆ ರಾಷ್ಟ್ರಪತಿ, ಕೇಂದ್ರ ಸರ್ಕಾರದ ಗಮನಕ್ಕೆ ತರಲಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ದೇಶದ್ರೋಹ ಎಸಗಿದ್ದಾರೆ. ಎರಡು ಹೊತ್ತು ಊಟಕ್ಕಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎನ್ನುವ ಹೇಳಿಕೆ ದೇಶದ ಕುರಿತು ಅವರ ಯೋಗ್ಯತೆ ತೋರಿಸುತ್ತದೆ. ಐಟಿ ದಾಳಿಗೆ ಆಗಮಿಸುವ ಅಧಿಕಾರಿಗಳ ಕುರಿತ ರಹಸ್ಯ ಸೋರಿಕೆ ಮೂಲಕ ಗೌಪ್ಯತೆ ಕಾಪಾಡಿಲ್ಲ, ಭ್ರಷ್ಟರ ವಿರುದ್ಧ ಐಟಿ ದಾಳಿ ನಡೆದರೆ ಅವರ ಪರವಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸುವ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮುಂದುವರೆಯುವ ನೈತಿಕತೆ ಹೊಂದಿಲ್ಲ ಎಂದರು.
ಚುನಾವಣೆಗಾಗಿ ರಾಜ್ಯ ಪ್ರವಾಸ ತಡೆಯಲು ಶಿವಮೊಗ್ಗದಲ್ಲಿ ಜೆಡಿಎಸ್ ತಂತ್ರಗಾರಿಕೆ ಮಾಡುವುದಾಗಿ ಹೇಳಿತ್ತು. ಆದರೆ ಮುಖ್ಯಮಂತ್ರಿ ತಮ್ಮ ಮಗನ ಗೆಲ್ಲಿಸುವುದಕ್ಕೆ ಒಂದು ವಾರ ಮಂಡ್ಯದಲ್ಲೆ ಠಿಕಾಣಿ ಹೂಡಿದ್ದರು, ಈಗಾಗಲೇ ಮೂರು ಸುತ್ತು ರಾಜ್ಯ ಪ್ರವಾಸ ಮುಗಿಸಿ ಇದೀಗ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಸುಳ್ಳು ಹೇಳಿದ ಕುಮಾರಸ್ವಾಮಿ ಈವರೆಗೆ ಯಾಕೆ ಎಲ್ಲ ರೈತರ ಸಾಲಮನ್ನಾ ಮಾಡಿಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ವರ್ಗಾವಣೆ ದಂಧೆ, ಅಕ್ರಮ ಗುತ್ತಿಗೆ ನೀಡುವ ಮೂಲಕ ಭ್ರಷ್ಟಾಚಾರದಲ್ಲಿ ಸರಕಾರ ತೊಡಗಿದ್ದು ಇದನ್ನು ಕಿತ್ತೆಸೆಯಬೇಕು. ಕೇಂದ್ರದ ಜನಪರ ಕಾರ್ಯಕ್ರಮ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22ಸ್ಥಾನ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಾವು ಒಕ್ಕಲಿಗರ ಪರ, ಸುಮಲತಾ ನಾಯ್ಡು ಎಂದು ಕುಮಾರಸ್ವಾಮಿ ಹೇಳಿದರೆ, ಸಿದ್ಧರಾಮಯ್ಯ ತಾವು ಕುರುಬರ ಪರ ಎನ್ನುತ್ತಾರೆ. ಬಿಜೆಪಿ ಮಾತ್ರ ದೇಶಕ್ಕಾಗಿ ನಮಗೆ ಮತ ನೀಡಿ ಎನ್ನುತ್ತಿದೆ, ಜಾತಿವಾದಿಗಳು ಯಾರು ಎನ್ನುವುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ, ನರೇಂದ್ರ ಮೋದಿ ನರಹಂತಕ ಎಂದಿಗೂ ಪ್ರಧಾನಿ ಆಗಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದರು. ಅವು ಸುಳ್ಳಾಗಿವೆ. ಹಾಗೆಯೆ ಬಿಎಸ್‌ವೈ ಮುಖ್ಯಮಂತ್ರಿ ಆಗಲ್ಲ, ರಾಘವೇಂದ್ರ ಗೆಲ್ಲಲ್ಲ ಎನ್ನುತ್ತಿದ್ದಾರೆ ಅದೂ ಸುಳ್ಳಾಗುತ್ತದೆ. ಶೀಲಾ ದೀಕ್ಷಿತ್, ಜನಾರ್ಧನ ಪೂಜಾರಿ, ಖುದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪುನಃ ಮೋದಿ ಪ್ರಧಾನಿ ಆಗಲಿ ಎಂದಿದ್ದಾರೆ. ಸ್ವತಃ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರು ಮೋದಿ ಎನ್ನುತ್ತಿದ್ದು ಗೆಲುವು ನಮ್ಮದೇ ಎನ್ನುವುದು ಅದರಿಂದಲೇ ತಿಳಿಯುತ್ತದೆ ಎಂದರು.
ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಕಂಕಣಬದ್ಧನಾಗಿದ್ದು ದೊರೆತ ಅಲ್ಪಾವಧಿಯಲ್ಲಿಯೇ ರೈಲ್ವೆ ಯೋಜನೆ, ಇಎಸ್‌ಐ ಆಸ್ಪತ್ರೆ, ಪಾಸ್ ಪೋರ್ಟ್ ಕೇಂದ್ರ, ಸಿಗಂಧೂರು ಸೇತುವೆ ಹೀಗೆ ಹಲವು ಕೆಲಸ ಮಾಡಿದ್ದೇನೆ. ನೀರಾವರಿ ಯೋಜನೆ ಮಂಜೂರಾತಿಗೆ ಬೋರ್ಡ್ ಮೀಟಿಂಗ್‌ನಲ್ಲಿ ಅಡ್ಡಿ ಪಡಿಸುವ ಕೆಲಸ ಆದರೂ ಅದಕ್ಕೆ ಯಾವುದೇ ಆಸ್ಪದ ನೀಡದೆ ಬಿಎಸ್‌ವೈ ಮೇಲಿನ ಗೌರವಕ್ಕೆ ಯೋಜನೆಗೆ ಹಣ ಮೀಸಲಿಡಲಾಗಿದೆ. ಸಿದ್ಧರಾಮಯ್ಯಸರಕಾರ ನೀರಾವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಪುನಃ ಸಂಸತ್’ಗೆ ಕಳುಹಿಸಿದಲ್ಲಿ ಮುಂದೆಯೂ ಉತ್ತಮ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರೈತರಿಗೆ ಜೈಲಿಗೆ ಹೋಗುವಂತೆ ಕಾನೂನು ತಂದಿದ್ದು ಬಿಎಸ್‌ವೈ ಅಲ್ಲ ಬದಲಿಗೆ ಕುಮಾರಸ್ವಾಮಿ. ಅದಕ್ಕೆ ಕಾರಣ ಈ ಕುರಿತು ಲಿಖಿತ ದಾಖಲೆ ನನ್ನ ಬಳಿಯಿದೆ ಎಂದು ತಿಳಿಸಿದರು. ಬೆಂಗಳೂರಿನ ತಮ್ಮ ವಿರೋಧಿಗಳ ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಕಾನೂನು ಜಾರಿಗೊಳಿಸಲು ಹೆಚ್ಚಿನ ಆಸಕ್ತಿ ಹೊಂದಿದ್ದು ಬಿಎಸ್‌ವೈ ಪ್ರತಿಭಟಿಸಿದ್ದರು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಎಂಎಲ್’ಸಿ, ಚಿತ್ರನಟಿ ತಾರಾ ಅನುರಾಧಾ, ಶಾಸಕ ರೇಣುಕಾಚಾರ್ಯ, ಬಸವರಾಜ ಬೊಮ್ಮಾಯಿ, ಕುಮಾರ ಬಂಗಾರಪ್ಪ, ಅಶೋಕನಾಯ್ಕ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿಶೆಟ್ಟಿ, ರುದ್ರೇಗೌಡ, ಅರುಣ್, ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಬಿ.ಕೆ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಪ್ರತಿನಿಧಿ, ಶಿಕಾರಿಪುರ)
Discussion about this post