ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಶಾಸಕರನ್ನು ಖರೀದಿಸಿ, ಸರ್ಕಾರಗಳನ್ನು ಉರುಳಿಸುತ್ತಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರಜಾಪ್ರಭುತ್ವ ಉಳಿಸಿ ಎಂದು ಹೋರಾಟ ನಡೆಸುತ್ತಿದೆ. ಇದೇ ಕಾಂಗ್ರೆಸ್ ರಾಜಸ್ಥಾನದಲ್ಲಿ ಏನು ಮಾಡಿದೆ? ಸರ್ಕಾರ ರಚಿಸಲು ಬೆಂಬಲ ನೀಡಿದ ಬಿಎಸ್’ಪಿಯ ಎಲ್ಲ ಶಾಸಕರನ್ನೂ ಕಾಂಗ್ರೆಸ್ ಸೆಳೆದಿಲ್ಲವೇ? ಇದು ಖರೀದಿಯಲ್ಲವೇ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಸರ್ಕಾರ ರಚಿಸಲು ಬೆಂಬಲ ಕೊಟ್ಟವರನ್ನೇ ಕುತಂತ್ರದಿಂದ ಸೆಳೆದುಕೊಳ್ಳುವುದು, ಇಡೀ ಪಕ್ಷವನ್ನೇ ವಿಲೀನ ಮಾಡಿಸಿಕೊಳ್ಳುವುದು ಪ್ರಜಾಪ್ರಭುತ್ವ ನಡೆಯೇ? ಸಮಾನ ಮನಸ್ಕ ಪಕ್ಷಗಳನ್ನು ಒಡೆದು ಶಾಸಕರನ್ನು ಸೆಳೆಯುತ್ತಿದ್ದರೆ ನಿಮಗೆ ಯಾರು ಬೆಂಬಲ ಕೊಟ್ಟಾರು. ಈ ತಪ್ಪುಗಳು ನಿಮಗೆ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಶಾಸಕರ ಖರೀದಿ ವಿಚಾರವಾಗಿ ದೊಡ್ಡ ಗಂಟಲು ಮಾಡುತ್ತಿರುವ ಕಾಂಗ್ರೆಸ್ ಹಿಂದೆ ಜೆಡಿಎಸ್ ಅನ್ನು ಒಡೆದಿಲ್ಲವೇ? ಒಡೆಯಲು ಪ್ರಯತ್ನಗಳನ್ನು ಮಾಡಲಿಲ್ಲವೇ? ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಟು ಮಂದಿಯನ್ನು ಕೇವಲ ರಾಜ್ಯಸಭೆ ಚುನಾವಣೆಗಾಗಿ ಖರೀದಿಸಲಿಲ್ಲವೇ? ಇದು ಪ್ರಜಾಸತ್ತಾತ್ಮಕವೇ? ಖರೀದಿ ವಿಚಾರದಲ್ಲಿ ಎರಡೂ ಪಕ್ಷಗಳೂ ’ಅಪರಾಧಿ’ಗಳೇ ಎಂದು ಕಿಡಿ ಕಾರಿದ್ದಾರೆ.
ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಮ್ಮ ಶಾಸಕರನ್ನು ಖರೀದಿ ಮಾಡಿರಲಿಲ್ಲವೇ? 2018ರ ವಿಧಾನಸಭೆ ಚುನಾವಣೆ ನಂತರ ನಮ್ಮ ಶಾಸಕರನ್ನು ಖರೀದಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಹೊಂಚು ಹಾಕಿರಲಿಲ್ಲವೇ? ಕಾಂಗ್ರೆಸ್ ಬಳಿ ಈ ಪ್ರಶ್ನೆಗಳಿಗೆ ಉತ್ತರಿಸಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದೇ ಕಾಂಗ್ರೆಸ್ ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿತ್ತು. ಇದನ್ನು ಮನಗಂಡೇ ನಾನು ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಬೇಕಾಯಿತು. ಪಕ್ಷಗಳನ್ನು ಒಡೆಯುವ, ಶಾಸಕರನ್ನು ಖರೀದಿಸುವ ವ್ಯವಾಹರದಲ್ಲಿ ಕಾಂಗ್ರೆಸ್ ನಿಪುಣ. ’ಕುದುರೆ ವ್ಯಾಪಾರ’ ಎಂಬ ಭಾಷೆ ಹುಟ್ಟಿದ್ದೇ ಕಾಂಗ್ರೆಸ್’ನಿಂದ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಉಳಿಸಲು ಪ್ರಾಣ ನೀಡುವುದಾಗಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಹೇಳುತ್ತಿದ್ದರು. ಸ್ವಾಮಿ, ಜೀವ ಅಮೂಲ್ಯ. ನೀವು ಪ್ರಾಣ ಕೊಡುವುದು ಬೇಡ. ಕಾಂಗ್ರೆಸ್ ನಡೆದು ಬಂದ ದಾರಿಯನ್ನು ಒಂದು ಬಾರಿ ನೆನಪಿಸಿಕೊಳ್ಳಿ. ನಂತರ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಸದೃಢಗೊಳಿಸುವತ್ತ ಚಿಂತನೆ ಮಾಡಿ. ಪ್ರಜಾಪ್ರಭುತ್ವ ತಂತಾನೆ ಉಳಿಯುತ್ತದೆ ಎಂದರು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get In Touch With Us info@kalpa.news Whatsapp: 9481252093
Discussion about this post